ಕೆಂಗಣ್ಣು/ ಮದ್ರಾಸ್‌ ಐ; ಕೆಂಗಣ್ಣಿಗೆ ಸ್ವಯಂ ಐಸೊಲೇಶನ್‌ ಉತ್ತಮ ಪರಿಹಾರ- ಡಾ| ಸುಲತಾ ಭಂಡಾರಿ

ಶೇರ್ ಮಾಡಿ

ಕೋಳಿ ಕಣ್ಣು (ಕೆಂಗಣ್ಣು/ ಮದ್ರಾಸ್‌ ಐ) ಹಾವಳಿ ನಿಯಂತ್ರಿಸಲು ಸ್ವಯಂ ಆಸಕ್ತಿಯಿಂದ ಪ್ರತ್ಯೇಕವಾಗಿರುವುದು(ಐಸೊಲೇಶನ್‌) ಉತ್ತಮ ಪರಿಹಾರವಾಗಿದೆ ಎಂದು ಮಣಿಪಾಲ ಕೆಎಂಸಿ ಮತ್ತು ಕಸ್ತೂರ್ಬಾ ಆಸ್ಪತ್ರೆಯ ನೇತ್ರ ವಿಭಾಗದ ಯುನಿಟ್‌ ಹೆಡ್‌ ಮತ್ತು ಪ್ರಾಧ್ಯಾಪಕಿ ಡಾ| ಸುಲತಾ ಭಂಡಾರಿ ಸಲಹೆ ನೀಡಿದ್ದಾರೆ.

ಕೆಂಗಣ್ಣು ಎಂದರೆ ಕಣ್ಣಿನ ಬಿಳಿ ಭಾಗ ಕೆಂಪಾಗುವ ಕಾಯಿಲೆಯಾಗಿದೆ. ಈ ವೇಳೆ ಕಣ್ಣಿನಲ್ಲಿ ನೀರು ಬರುವುದು, ರೆಪ್ಪೆ ಯಲ್ಲಿ ಊತ, ಕಣ್ಣಿನಲ್ಲಿ ಹಿಕ್ಕು, ಕಿವಿಯ ಹತ್ತಿರ ನೋವು, ಕಣ್ಣು ತೆರೆಯಲು ಕಷ್ಟವಾಗುವಂತಹ ಸಮಸ್ಯೆಗಳು ಉದ್ಭವಿಸುತ್ತವೆ. ಬಿಸಿಲು ನೋಡಲು ಆಗದಿರುವುದು, ಚಚ್ಚುವಂತಾಗುತ್ತದೆ. ಈ ಸಮಸ್ಯೆ ಗಂಭೀರವಾದರೆ ಕಣ್ಣಿನಲ್ಲಿರುವ ಕಪ್ಪು ಭಾಗದಲ್ಲಿಯೂ ಸಣ್ಣ ಸಣ್ಣ ಚುಕ್ಕೆಗಳು ಕಾಣಿಸಿಕೊಂಡು ದೃಷ್ಟಿದೋಷವೂ ಉಂಟಾಗಬಹುದು.

ರಜೆ, ಮನೆಯಲ್ಲಿ ಪ್ರತ್ಯೇಕ, ವಾಸ ಉತ್ತಮ
ಕೆಂಗಣ್ಣು ಸಮಸ್ಯೆ ಕಾಣಿಸಿಕೊಂಡರೆ ತಜ್ಞ ನೇತ್ರ ವೈದ್ಯರನ್ನು ಭೇಟಿಯಾಗಿ ಸೂಕ್ತ ಔಷಧ ಪಡೆದು ಕೊಳ್ಳಬೇಕು. ಶಾಲೆ ಹಾಗೂ ಕೆಲಸಕ್ಕೆ ಹೋಗುವವರಾದರೆ ರಜೆ ಮಾಡುವುದೇ ಉತ್ತಮ. 7 ರಿಂದ 8 ದಿನಗಳ ಕಾಲ ಇದರ ತೀವ್ರತೆ ಇರುವ ಕಾರಣ ಈ ಅವಧಿಯಲ್ಲಿ ಸ್ವಯಂ ಐಸೊಲೇಶನ್‌ಗೆ ಒಳಗಾಗಬೇಕು. ಮನೆಯಲ್ಲಿ ಪ್ರತ್ಯೇಕವಾಗಿ ವಾಸ ಮಾಡಬೇಕು. ಕೆಂಗಣ್ಣಿಗೆ ಗುರಿಯಾದವರು ತಾವು ಬಳಸಿದ ವಸ್ತುಗಳನ್ನು ಇತರರು ಬಳಕೆ ಮಾಡದಂತೆ ಎಚ್ಚರ ವಹಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಕಾರಣಕ್ಕೂ ಓಡಾಟ ಮಾಡಬಾರದು. ಮುಖ್ಯವಾಗಿ ಶುಚಿತ್ವಕ್ಕೆ ಆದ್ಯತೆ ನೀಡಬೇಕು.

ಮುನ್ನೆಚ್ಚರಿಕೆ ಹೇಗೆ?
ಮುಖ್ಯವಾಗಿ ಜನದಟ್ಟಣೆ ಇರುವ ಪ್ರದೇಶಗಳಿಗೆ ಹೋಗಬಾರದು. ಲಕ್ಷಣಗಳು ಕಾಣಿಸಿಕೊಂಡಾಗ ಕುದಿಸಿ ತಣ್ಣಗಾದ ನೀರಿನಲ್ಲಿ ಹತ್ತಿ ಉಂಡೆ ಒದ್ದೆ ಮಾಡಿ ಕಣ್ಣನ್ನು ಶುಚಿಗೊಳಿಸಬಹುದು. ಪದೇ ಪದೆ ಕಣ್ಣಿನ ಮೇಲೆ ಕೈಯಾಡಿಸಬಾರದು.
ಈಜು ಕೊಳಗಳನ್ನು ಬಳಸಬಾರದು. ಏಕೆಂದರೆ ನೀರಿನಿಂದ ವೈರಾಣುಗಳು ಬಹಳ ವೇಗದಲ್ಲಿ ಹರಡುತ್ತವೆ. ವೈದ್ಯರ ಸಲಹೆ ಇಲ್ಲದೆ ಸ್ಟಿರಾಯ್ಡ ಐ ಡ್ರಾಪ್‌ ಕೂಡ ಬಳಸಬಾರದು. ತೆಂಗಿನ ಎಣ್ಣೆ, ಸಹಿತ ಅಡುಗೆ ಮನೆಯೊಳಗೆ ಬಳಕೆ ಮಾಡುವ ಸಾಮಗ್ರಿಗಳನ್ನು ಬಳಸಲೇಬಾರದು. ಯಾಕೆಂದರೆ ಇದು ಕೆಂಗಣ್ಣು ಆಗದೆ ಬೇರೆ ರೀತಿಯ ಸಮಸ್ಯೆ ಆಗಿದ್ದರೆ ಕಣ್ಣಿನಲ್ಲಿ ಫ‌ಂಗಸ್‌ ಬೆಳೆದು ಕಪ್ಪುಗುಡ್ಡೆಯೂ ಬಿಳಿಯಾಗುತ್ತದೆ. ಬಳಿಕ ಇದು ಹುಣ್ಣಾಗಿ ಕಣ್ಣನ್ನೇ ತೆಗೆಯಬೇಕಾದ ಸನ್ನಿವೇಶವೂ ಎದುರಾಗಬಹುದು.

ಚಿಕಿತ್ಸೆ ಹೇಗೆ?
ಈಗ ಆಸ್ಪತ್ರೆಗೆ ದಿನನಿತ್ಯ 25ರಿಂದ 30 ಮಂದಿ ಈ ಕಾಯಿಲೆಯ ಚಿಕಿತ್ಸೆಗಾಗಿಯೇ ಆಗಮಿಸುತ್ತಿದ್ದಾರೆ. ತಜ್ಞ ನೇತ್ರ ವೈದ್ಯರ ಬಳಿ ಕೆಂಗಣ್ಣು ತಪಾಸಣೆಗೆಂದು ಹಲವಾರು ಪರಿಕರಗಳಿರುತ್ತವೆ. ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿಯೂ ಕಣ್ಣಿನ ತಜ್ಞರ ಸೇವೆ ಲಭ್ಯವಿದೆ. ವೈದ್ಯರೂ ಚಿಕಿತ್ಸೆ ನೀಡುವಾಗ ಎಚ್ಚರಿಕೆ ವಹಿಸಬೇಕು. ನಮ್ಮ ಆಸ್ಪತ್ರೆಯಲ್ಲಿ ಒಮ್ಮೆ ರೋಗಿ ಬಂದು ಹೋದರೆ ಕನಿಷ್ಠ ಆರೇಳು ನಿಮಿಷ ಶುಚಿಗೊಳಿಸುವ ಕೆಲಸ ನಡೆಯುತ್ತದೆ. ಕಣ್ಣಿನ ಗಂಭೀರತೆಯನ್ನು ಅರಿತು ಸೂಕ್ತ ಆ್ಯಂಟಿಬಯೋಟಿಕ್‌ ಆಯಿಂಟ್‌ಮೆಂಟ್‌ ನೀಡಲಾಗುತ್ತದೆ. ವೈದ್ಯರು ಸೂಚಿಸಿದಂತೆಯೇ ಅದನ್ನು ತೆಗೆದುಕೊಳ್ಳಬೇಕು. ನೇತ್ರ ತಜ್ಞರಲ್ಲದ ವೈದ್ಯರು ಟಾರ್ಚ್‌ ಲೈಟ್‌ ಹಾಕಿ ನೋಡುವುದಿದೆ. ಈ ಚಿಕಿತ್ಸೆ ಕೂಡ ಪರವಾಗಿಲ್ಲ. ಚಿಕಿತ್ಸೆಯ ಅವಧಿಯಲ್ಲಿ ಮೊಬೈಲ್‌ ಹಾಗೂ ಟಿವಿ ನೋಡಲು ಯಾವುದೇ ಸಮಸ್ಯೆ ಇಲ್ಲ. ಪತ್ರಿಕೆ, ಪುಸ್ತಕಗಳನ್ನೂ ಓದಬಹುದು. ಆದರೆ ಕೆಂಗಣ್ಣು ಪೀಡಿತರು ಮುಟ್ಟಿದ ವಸ್ತುಗಳನ್ನು ಇತರರು ಮುಟ್ಟಬಾರದು. 7ರಿಂದ 8 ದಿನಗಳ ಕಾಲ ಮನೆಮಂದಿಯಿಂದ ಅಂತರ ಕಾಯ್ದುಕೊಳ್ಳುವ ಜತೆಗೆ ಶುಚಿತ್ವಕ್ಕೆ ಆದ್ಯತೆ ನೀಡಬೇಕು.

ಸೆಲೂನ್‌ಗಳಲ್ಲಿ ಎಚ್ಚರ
ಕೆಂಗಣ್ಣು ಸೋಂಕಿತರು ಸೆಲೂನ್‌ಗಳಿಗೆ ಹೋಗಬಾರದು. ಹೋದದ್ದೇ ಆದಲ್ಲಿ ಅವರಿಗೆ ಬಳಸಿದ ಬಟ್ಟೆ, ಸಹಿತ ಉಪಯೋಗಿಸಿದ ವಸ್ತುಗಳನ್ನು ಇನ್ನೊಬ್ಬರಿಗೆ ಸೆಲೂನ್‌ ಸಿಬಂದಿ ಬಳಸಬಾರದು. ಇದು ಕೂಡ ಕಾಯಿಲೆ ಹಬ್ಬಲು ಕಾರಣವಾಗುತ್ತದೆ. ಕೆಂಗಣ್ಣು ಸೋಂಕಿತರು ಬಂದರೆ ಅವರನ್ನು ಹಿಂದಕ್ಕೆ ಕಳುಹಿಸುವುದು ಉತ್ತಮ.

ಹೇಗೆ ಹರಡುತ್ತದೆ?
ಕೆಂಗಣ್ಣು ಸೋಂಕಿಗೆ ಒಳಗಾದ ವ್ಯಕ್ತಿಗಳು ಕಣ್ಣಿಗೆ ಕೈ ಹಾಕಿ ಸ್ಪರ್ಶಿಸಿದ ಜಾಗವನ್ನು ಇತರರು ಸ್ಪರ್ಶಿಸುವುದರಿಂದ ಹರಡುವ ಸಾಧ್ಯತೆಗಳಿರುತ್ತವೆ. ಇದೇ ಕಾರಣಕ್ಕೆ ಸಾರ್ವಜನಿಕ ಸ್ಥಳದಲ್ಲಿ ಓಡಾಟ ಮಾಡಿದ ಬಳಿಕ ನಮ್ಮ ಕೈಯನ್ನು ಸಾಬೂನಿನಿಂದ ತೊಳೆದುಕೊಳ್ಳುವುದು ಉತ್ತಮ. ಜತೆಗೆ ಈ ಅವಧಿಯಲ್ಲಿ ಪದೇ ಪದೆ ಕಣ್ಣಿಗೆ ಕೈ ಹಾಕದಿರುವುದು ಉತ್ತಮ.

ಶಾಲಾ ಮಕ್ಕಳೇ ಎಚ್ಚರ ವಹಿಸಿ
ಸೋಂಕಿಗೆ ಒಳಗಾದವರು ಕೂಲಿಂಗ್‌ ಗ್ಲಾಸ್‌ ಧರಿಸುತ್ತಾರಾದರೂ ಇದರಿಂದ ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ಹೇಳಲು ಅಸಾಧ್ಯ. ಇದೇ ರೀತಿ ಮಕ್ಕಳು ಈ ಸೋಂಕಿಗೆ ತುತ್ತಾದರೆ ಶಾಲಾ-ಕಾಲೇಜಿಗೆ ರಜೆ ಹಾಕಬೇಕು. ಇಲ್ಲದಿದ್ದರೆ ಇದು ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಹಬ್ಬುವ ಸಾಧ್ಯತೆಗಳಿರುತ್ತವೆ. ಈ ಬಗ್ಗೆ ವೈದ್ಯರೇ ಸರ್ಟಿಫಿಕೆಟ್‌ ನೀಡುತ್ತಾರೆ. ಪೋಷಕರು ಕೂಡ ಮಕ್ಕಳಿಗೆ ವೈದ್ಯರು ನೀಡಿದ ಔಷಧವನ್ನು ಕಣ್ಣಿಗೆ ಹಾಕಿದ ಬಳಿಕ ತಮ್ಮ ಕೈಗಳನ್ನು ಸಾಬೂನಿನಿಂದ ತೊಳೆಯಬೇಕು. ಜತೆಗೆ ಅವರು ಬಳಸಿದ ವಸ್ತುಗಳನ್ನು ಬಳಸಬಾರದು. ಕೆಲವು ದಿನಗಳ ಮಟ್ಟಿಗೆ ಪ್ರತ್ಯೇಕ ಕೊಠಡಿಯಲ್ಲಿ (ಐಸೊಲೇಶನ್‌) ವಾಸ ಮಾಡಿದರೆ ಉತ್ತಮ.

Leave a Reply

error: Content is protected !!