ಪುಟ್ಟ ಕಂದಮ್ಮ ಶೌರ್ಯನನ್ನು ಬಿಟ್ಟು ಇಷ್ಟು ಬೇಗ ಸ್ಪಂದನಾ ಹೋಗಬಾರದಿತ್ತು ಎಂದು ಕಣ್ಣೀರಿಟ್ಟವರ ಸಂಖ್ಯೆಯೇ ಹೆಚ್ಚಾಗಿತ್ತು. ಮೃತ ಸ್ಪಂದನಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಬಂದಿದ್ದ ಅವರ ಸಂಬಂಧಿಕರ ಶೌರ್ಯನನ್ನು ಕಂಡು ಕಣ್ಣೀರಾದರು. ಅಮ್ಮನ ಮೃತದೇಹದ ಪಕ್ಕದಲ್ಲೇ ನಿಂತಿದ್ದ ಶೌರ್ಯನನ್ನು ಕಂಡು ಅನೇಕರು ಭಾವುಕರಾದರು.
ತಾಯಿಗೆ ಹೃದಯಾಘಾತವಾಗಿದೆ ಎಂದು ತಿಳಿಯುತ್ತಲೇ ತಂದೆ ವಿಜಯ ರಾಘವೇಂದ್ರ ಜೊತೆ ಶೌರ್ಯನೂ ಬ್ಯಾಂಕಾಕ್ ಗೆ ತೆರಳಿದ್ದರು. ಅಮ್ಮನ ಮೃತದೇಹದ ಜೊತೆ ಶೌರ್ಯ ಬೆಂಗಳೂರಿಗೆ ವಾಪಸ್ ಆದರು. ವಿಮಾನ ನಿಲ್ದಾಣದಿಂದ ಅಪ್ಪನ ಕೈ ಹಿಡಿದುಕೊಂಡೆ ತಾಯಿಯ ಮನೆಗೆ ಆಗಮಿಸಿದ್ದ ಪುಟಾಣಿ ಶೌರ್ಯ.
ಪುತ್ರನ ಮೇಲೆ ಅತೀವ ಪ್ರೀತಿ ಹೊಂದಿದ್ದರು ಸ್ಪಂದನಾ. ಪತಿಯಂತೆಯೇ ಮಗನನ್ನು ಕೂಡ ಸಿನಿಮಾ ರಂಗದಲ್ಲಿ ಬೆಳಸಬೇಕು ಎಂದು ಕನಸು ಕಂಡಿದ್ದರು. ಮಗನನ್ನು ಹೀರೋ ಮಾಡಬೇಕು ಎನ್ನುವ ಉದ್ದೇಶದಿಂದಲೇ ಖ್ಯಾತ ನಿರ್ದೇಶಕ ಟಿ.ಎಸ್.ನಾಗಾಭರಣ ಬಳಿ ತರಬೇತಿಗೂ ಕಳುಹಿಸುತ್ತಿದ್ದರು.
ಬ್ಯಾಂಕಾಕ್‌ನಲ್ಲಿ ಸ್ಪಂದನಾಗೆ ಹೃದಯಾಘಾತವಾದಾಗ ನಾಗಾಭರಣ ಜೊತೆಯಲ್ಲೇ ಶೌರ್ಯ ತರಬೇತಿ ಪಡೆಯುತ್ತಿದ್ದರು. ಭಾನುವಾರ ಸಂಜೆ ನಾಗಾಭರಣ ಮನೆಯಿಂದ ವಿಜಯ ರಾಘವೇಂದ್ರ ಮಗನನ್ನು ಮನೆಗೆ ಕರೆದುಕೊಂಡು ಹೋಗಿದ್ದರು.