ಇಚ್ಲಂಪಾಡಿ ಗ್ರಾಮದ ಕೆರ್ನಡ್ಕ ನಿವಾಸಿ ಅನಾರೋಗ್ಯ ಪೀಡಿತೆ ಸಾವಿತ್ರಿ(62ವ)ಅವರ ಮನೆಗೆ ತೆರಳಲು ಕಾಲುದಾರಿ ಮಾತ್ರ ಇದ್ದು, ಮಾನವೀಯ ನೆಲೆಯಲ್ಲಿ ಖಾಸಗಿ ಜಾಗದ ಮಾಲೀಕ ಆಟೋ ರಿಕ್ಷಾ ಸಂಚರಿಸುವಷ್ಟು 7 ಅಡಿ ಅಗಲಕ್ಕೆ ರಸ್ತೆ ನಿರ್ಮಾಣ ಮಾಡಲು ಜಾಗ ನೀಡಲು ಜು.30ರಂದು ಒಪ್ಪಿಗೆ ಸೂಚಿಸಿದ್ದಾರೆ.
ಕೆರ್ನಡ್ಕ ನಿವಾಸಿ ಕೆ.ಗೋಪಾಲನ್‌ರವರ ಪತ್ನಿ, ನಿವೃತ್ತ ಅಂಗನವಾಡಿ ಸಹಾಯಕಿ ಸಾವಿತ್ರಿಯವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ವಾರದಲ್ಲಿ ಮೂರು ದಿನ ಡಯಾಲಿಸಿಸ್‌ಗೆ ಪುತ್ತೂರಿಗೆ ಕರೆತರಬೇಕಾಗಿದ್ದು ಅವರ ಮನೆಗೆ ರಸ್ತೆ ಸಂಪರ್ಕವಿಲ್ಲದೇ ಅವರನ್ನು ಹೊತ್ತುಕೊಂಡೇ ಸುಮಾರು 150 ರಿಂದ 200 ಮೀ.ದೂರ ರಸ್ತೆ ಇರುವಲ್ಲಿಯ ತನಕ ಕರೆತರಬೇಕಾಗಿತ್ತು. ಇಚ್ಲಂಪಾಡಿ-ಪೆರಿಯಶಾಂತಿ ಡಾಮಾರು ರಸ್ತೆಯ ಕೆರ್ನಡ್ಕ ಎಂಬಲ್ಲಿಂದ ಸಾವಿತ್ರಿಯವರ ಮನೆಯು ಸುಮಾರು 250 ಮೀ.ದೂರದಲ್ಲಿದ್ದು, ಈ ಪೈಕಿ 100ಮೀ.ನಷ್ಟು ದೂರ ವಾಹನ ಸಂಚಾರಕ್ಕೆ ಮಣ್ಣಿನ ರಸ್ತೆಯಿದ್ದು ಅಲ್ಲಿಂದ 150ಮೀ.ನಷ್ಟು ದೂರ ಕಾಲುದಾರಿಯಲ್ಲಿ ಸಾಗಬೇಕಾಗಿದೆ. ಈ ಕಾಲು ದಾರಿಯ ಎರಡೂ ಬದಿಯೂ ಖಾಸಗಿಯವರ ತೋಟವಿದೆ. ಈಗಾಗಲೇ ತಮ್ಮ ಪಟ್ಟಾ ಜಾಗದಲ್ಲಿ ಕಾಲುದಾರಿಗೆ ಜಾಗ ಬಿಟ್ಟುಕೊಟ್ಟಿದ್ದ ಕೆ.ಸಿ.ಮ್ಯಾಥ್ಯು, ಜನಾರ್ದನ ಗೌಡ ಕೆರ್ನಡ್ಕ, ಮೋನಪ್ಪ ಗೌಡ ಕೆರ್ನಡ್ಕರವರು ಇದೀಗ ಮಾನವೀಯ ನೆಲೆಯಲ್ಲಿ ಅವರ ಕೋರಿಕೆಯಂತೆ ಸಾವಿತ್ರಿಯವರ ಮನೆಗೆ ರಿಕ್ಷಾ ಸಂಚರಿಸುವಷ್ಟು 7 ಅಡಿ ಅಗಲಕ್ಕೆ ರಸ್ತೆ ನಿರ್ಮಾಣಕ್ಕೆ ಜಾಗವನ್ನು ತಮ್ಮ ಪಟ್ಟಾಜಾಗದಲ್ಲಿ ನೀಡಲು ಒಪ್ಪಿಗೆ ಸೂಚಿಸಿದ್ದಾರೆ.
ಈ ಸಂಬಂಧ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ, ಬಿಜೆಪಿ ನೆಲ್ಯಾಡಿ ಮಹಾಶಕ್ತಿಕೇಂದ್ರದ ಅಧ್ಯಕ್ಷರಾಗಿರುವ ಭಾಸ್ಕರ ಎಸ್.ಗೌಡ ಇಚ್ಲಂಪಾಡಿಯವರ ನೇತೃತ್ವದಲ್ಲಿ ಜು.30ರಂದು ಕೆ.ಸಿ.ಮ್ಯಾಥ್ಯು ಅವರ ಮನೆಯಲ್ಲಿ ಮಾತುಕತೆ ನಡೆಯಿತು.
ಸಾವಿತ್ರಿಯವರ ಮಗ ಸತೀಶ್ ಅವರ ಕೋರಿಕೆಯಂತೆ ಈಗಾಗಲೇ ಇರುವ ಕಾಲುದಾರಿಯಲ್ಲಿ ಆಟೋ ರಿಕ್ಷಾ ಸಂಚರಿಸುವಷ್ಟು 7 ಅಡಿ ಅಗಲಕ್ಕೆ ಅವರಿಗೆ ಬೇಕಾಗುವ ಸುಮಾರು 200 ಮೀ.ಉದ್ದದ ರಸ್ತೆ ನಿರ್ಮಾಣಕ್ಕೆ ಬೇಕಾಗುವಷ್ಟು ಜಾಗವನ್ನು ತಮ್ಮ ಪಟ್ಟಾ ಜಾಗದಲ್ಲಿ ನೀಡುವ ಸಂಬಂಧ ಎರಡೂ ಬದಿಯ ತಂತಿಬೇಲಿ ತೆರವುಗೊಳಿಸಿ ಅವಕಾಶ ಮಾಡಿಕೊಡಲು ಪಟ್ಟಾ ಜಾಗದ ಮಾಲಕರಾದ ಕೆ.ಸಿ.ಮ್ಯಾಥ್ಯು, ಜನಾರ್ದನ ಗೌಡ ಹಾಗೂ ಮೋನಪ್ಪ ಗೌಡರವರು ಒಪ್ಪಿಗೆ ಸೂಚಿಸಿದ್ದಾರೆ. ಸದ್ರಿ ರಸ್ತೆಯೂ ಸಾವಿತ್ರಿಯವರ 1 ಮನೆಗೆ ಮಾತ್ರ ಸಂಪರ್ಕಕ್ಕೆ ಬಳಕೆ ಹಾಗೂ ಯಾವುದೇ ಕಾರಣಕ್ಕೂ ಈ ರಸ್ತೆಯನ್ನು ಪಂಚಾಯತ್ ರಸ್ತೆಯನ್ನಾಗಿ ಮಾಡಬಾರದೂ ಎಂಬ ಷರತ್ತಿನ ಮೇಲೆ ಜಾಗ ನೀಡಲು ಪಟ್ಟಾ ಜಾಗದ ಮಾಲಕರು ಜು.30ರಂದು ಒಪ್ಪಿಗೆ ಸೂಚಿಸಿದ್ದರು .
ನೆಲ್ಯಾಡಿ ಹೊರಠಾಣಾಧಿಕಾರಿ ಕುಶಾಲಪ್ಪ ನಾಯ್ಕ, ಕೌಕ್ರಾಡಿ ಗ್ರಾ.ಪಂ.ಸದಸ್ಯ ರೋಯಿ ಯಾನೆ ಕುರಿಯಾಕೋಸ್ ಟಿ.ಎಂ, ಪಟ್ಟಾ ಜಾಗದ ಮಾಲಕ ಕೆ.ಸಿ.ಮ್ಯಾಥ್ಯು, ಅವರ ಪತ್ನಿ ಕುಂಞಿಮೋಳ್, ಪುತ್ರಿಯರಾದ ಶಾಲಿನಿ, ಶೈಲಾ, ಅಳಿಯಂದಿರಾದ ನಿವೃತ್ತ ಸೈನಿಕ ಪಿ.ಸಿ.ಪೌಲೋಸ್, ಜೋಸೆಫ್, ಇನ್ನೊಂದು ಬದಿಯ ಪಟ್ಟಾ ಜಾಗದ ಮಾಲಕರಾದ ಜನಾರ್ದನ ಗೌಡ ಕೆರ್ನಡ್ಕ, ಮೋನಪ್ಪ ಗೌಡ ಕೆರ್ನಡ್ಕ, ಅನಾರೋಗ್ಯ ಪೀಡಿತ ಸಾವಿತ್ರಿಯವರ ಮಗ ಸತೀಶ್, ಸೊಸೆ ಸುಜಾತ, ಮಾತುಕತೆ ವೇಳೆ ಉಪಸ್ಥಿತರಿದ್ದರು.
ಕಳೆದ ನಾಲ್ಕೈದು ದಿನಗಳಿಂದ ಕೌಕ್ರಾಡಿ ಗ್ರಾ.ಪಂ.ಸದಸ್ಯ ರೋಯಿ ಯಾನೆ ಕುರಿಯಾಕೋಸ್ ಟಿ.ಎಂ ನೇತತ್ವದಲ್ಲಿ ಗ್ರಾಮಸ್ಥರ ಸಹಾಯದಿಂದ ರಸ್ತೆಯ ಕೆಲಸ ಕೈಗೆತ್ತಿಕೊಂಡು ಇದೀಗ ಮುಗಿಸಿದ್ದಾರೆ.