ಪಟ್ರಮೆ: ಅನಾರು ಶಾಲೆಗೆ ಮತ್ತೆ ಸಂಕಷ್ಟ

ಶೇರ್ ಮಾಡಿ

ಪಟ್ರಮೆ: ನಾಲ್ಕೈದು ವರ್ಷಗಳ ಹಿಂದೆ ಕೊಠಡಿಗಳ ಕೊರತೆಯಿಂದಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದ ಎಂಟು ತರಗತಿಗಳಿರುವ ಪಟ್ರಮೆಯ ಅನಾರು ಸ.ಉ.ಹಿ.ಪ್ರಾ. ಶಾಲೆ ಊರ -ಪರ ಊರ ಸಹೃದಯಿಗಳ ಸಹಕಾರದಿಂದಾಗಿ ಕೊಠಡಿ ಕೊರತೆ ನೀಗಿಕೊಂಡು ಮತ್ತೆ ತಲೆ ಎತ್ತಿ ನಿಂತಿತ್ತು. ಕ್ರಮೇಣ ಮಕ್ಕಳ ಸಂಖ್ಯೆಯೂ ಏರುಗತಿಯಲ್ಲಿ ಸಾಗಿತ್ತು. ಶಿಕ್ಷಕರು ಐದು ಜನ ಇದ್ದರು. ಉತ್ತಮವಾಗಿ ಮುನ್ನಡೆಯುತ್ತಿತ್ತು. ಆದರೆ ಇದೀಗ ಮತ್ತೆ ಸಮಸ್ಯೆಗೆ ಸಿಲುಕಿಕೊಂಡಿದೆ.
2020 ರಿಂದ ನಂತರ ಕ್ರಮೇಣ ಇಬ್ಬರು ಶಿಕ್ಷಕರ ವರ್ಗಾವಣೆ ಆಗಿ ಬದಲಿ ಶಿಕ್ಷಕರು ಬಾರದೆ ಈ ವರ್ಷದ ಪ್ರಾರಂಭದಲ್ಲೇ ಮೂವರು ಶಿಕ್ಷಕರಿದ್ದರು. ಇದರಿಂದಾಗಿ ಕೆಲವು ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಿ ಮಕ್ಕಳ ಸಂಖ್ಯೆಯಲ್ಲಿ ಕುಸಿತ ಆಗಿತ್ತು. ಕಳೆದ ತಿಂಗಳು ಮತ್ತೊಬ್ಬ ಶಿಕ್ಷಕಿಯರಿಗೂ ವರ್ಗಾವಣೆ ಆಗಿ ಕೇವಲ ಮುಖ್ಯ ಶಿಕ್ಷಕರು ಮತ್ತೊಬ್ಬ ಸಹಶಿಕ್ಷಕರು ಮಾತ್ರ ಉಳಿದಿದ್ದರು. ಇದರಿಂದಾಗಿ ನೊಂದ ಪೋಷಕರು ಕಳೆದ ಜುಲೈ 14 ರಂದು ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಶಾಲಾವತಿಯಿಂದ ಹಾಗೂ ಊರಿನವರ ವತಿಯಿಂದ ಬೇರೆ ಮನವಿ ಸಲ್ಲಿಸಲಾಗಿ ಒಂದು ವಾರದ ಒಳಗಾಗಿ ಬದಲಿ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು.
ಆದರೆ ಇದುವರೆಗೂ ಅಧಿಕೃತ ಶಿಕ್ಷಕರು ಶಾಲೆಗೆ ಒದಗಿಸಿರದ ಕಾರಣ ಪೋಷಕರು ಇಂದು ಶಾಲೆಯಲ್ಲಿ ಸಭೆ ಸೇರಿ ಆತಂಕ ವ್ಯಕ್ತಪಡಿಸಿದರು. ಎಂಟು ತರಗತಿಗಳಿಗೆ ಇಬ್ಬರು ಶಿಕ್ಷಕರು ಪಾಠಮಾಡಲು ಸಾಧ್ಯವಿಲ್ಲ. ಜೊತೆಗೆ ಈ ವಾರ ಸಹಶಿಕ್ಷಕರು ರಜೆಯಲ್ಲಿ ಇದ್ದಾಗ ಮುಖ್ಯ ಶಿಕ್ಷಕರು ಮಾತ್ರ ಆಗಿ ತುಂಬಾ ಸಮಸ್ಯೆ ಆಗಿತ್ತು. ಶಿಕ್ಷಕರಿಲ್ಲದೆ ಪಾಠವೂ ಇಲ್ಲ, ಜೊತೆಗೆ ಮಕ್ಕಳನ್ನು ನೋಡ್ಕೊಳ್ಳುವವರೂ ಇಲ್ಲ. ಹೀಗಾದರೆ ಯಾವ ಧೈರ್ಯದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಎಂಬುದು ಪೋಷಕರ ಅಳಲಾಗಿದೆ.

ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಧನಂಜಯರು ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಫೋನ್ ಮಾಡಿ ಮಾತಾಡಿದಾಗ “ನಮಗೇನೂ ಮಾಡಲು ಸಾಧ್ಯವಿಲ್ಲ, ಸರಕಾರ ಕೊಟ್ಟರೆ ಒದಗಿಸುವುದಷ್ಟೆ ನಮ್ಮ ಕೆಲಸ” ಎಂದುತ್ತರಿಸಿದರು. ಇದರಿಂದಾಗಿ ಮೊದಲೇ ಆತಂಕದಲ್ಲಿದ್ದ ಪೋಷಕರು ಆಕ್ರೋಶಗೊಂಡರು. ಮುಂದಿನ ಸೋಮವಾರದಿಂದ ಶಾಲೆಗೆ ಶಿಕ್ಷಕರನ್ನು ಒದಗಿಸಿದ ನಂತರವೇ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದೆಂದು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆಂದು ಹಾಗೂ ಸೋಮವಾರ ಶಿಕ್ಷಕರು ಒದಗದೇ ಹೋದಲ್ಲಿ ಮರುದಿನದ ಸ್ವಾತಂತ್ರ್ಯ ದಿನಾಚರಣೆಯು ಕೇವಲ ಶಿಕ್ಷಕರು ಮಾತ್ರ ಆಚರಿಸುವ ಪರಿಸ್ಥಿತಿ ಉಂಟಾಗಲಿದ್ದು ಇದಕ್ಕೆ ಇಲಾಖೆಯೇ ಹೊಣೆಯಾಗಿದೆ ಹೊರತು ಶಾಲಾ ಶಿಕ್ಷಕರಾಗಲಿ, ಪೋಷಕರಾಗಲಿ ಹೊಣೆ ಅಲ್ಲ, ಬದಲಿ ಶಿಕ್ಷಕರ ವ್ಯವಸ್ಥೆ ಆಗುವವರೆಗೆ ಹೆಚ್ಚು ಶಿಕ್ಷಕರಿರುವಲ್ಲಿಂದ ಯಾರನ್ನಾದರೂ ನಿಯೋಜನೆ ಮಾಡುವ ಅಧಿಕಾರ ಇಲಾಖೆಗೆ ಇದ್ದರೂ ವ್ಯವಸ್ಥೆ ಮಾಡದೆ ಬೇಜವಾಬ್ದಾರಿಯಿಂದ ಇಲಾಖೆ ವರ್ತಿಸುವುದು ಸರಿಯಲ್ಲ ಎಂದು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಧನಂಜಯರು ಮಾಧ್ಯಮಕ್ಕೆ ತಿಳಿಸಿದರು ತಿಳಿಸಿದರು.

ಅಂತೂ ಪುನರ್ಚೇತನಗೊಂಡಿದ್ದ ಪಟ್ರಮೆಯ ಏಕೈಕ ಹಿರಿಯ ಪ್ರಾಥಮಿಕ ಶಾಲೆ ಇದೀಗ ಸರಕಾರದ ಇಲಾಖೆಯ ಎಡವಟ್ಟಿನಿಂದ ಸಮಸ್ಯೆ ಎದುರಿಸುತ್ತಿದೆ. ತುರ್ತು ಕ್ರಮ ಕೈಗೊಳ್ಳದೇ ಹೋದರೆ ಮಕ್ಕಳಿಲ್ಲದೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಶಾಲೆ ಎಂಬ ಅಪಖ್ಯಾತಿಗೆ ಒಳಗಾಗುವ ಪ್ರಸಂಗ ಅನಾರು ಶಾಲೆಗೆ ಎದುರಾಗಲಿದೆ.

Leave a Reply

error: Content is protected !!