ಪುತ್ತೂರು: ಫೋಟೋಗ್ರಾಫರ್ಸ್ ಎಸೋಸಿಯೇಶನ್‌ನಿಂದ ವಿಶ್ವ ಛಾಯಾಗ್ರಾಹಕರ ದಿನಾಚರಣೆ; ಛಾಯಾ ಸೌರಭ ಪ್ರಶಸ್ತಿ ಪ್ರದಾನ, ರಕ್ತದಾನ ಶಿಬಿರ, ವನಮಹೋತ್ಸವ

ಶೇರ್ ಮಾಡಿ

ಪುತ್ತೂರು: ವಿಶ್ವ ಛಾಯಾಗ್ರಾಹಕರ ದಿನದ ಅಂಗವಾಗಿ ಆ.19ರಂದು ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಶನ್ ಪುತ್ತೂರು ವಲಯದಿಂದ ವಿಶ್ವಛಾಯಾಗ್ರಾಹಕರ ದಿನಾಚರಣೆ, ಛಾಯಾ ಸೌರಭ ಪ್ರಶಸ್ತಿ ಪ್ರದಾನ, ವನಮಹೋತ್ಸವ ಹಾಗೂ ಬಿರುಮಲೆ ಪ್ರಜ್ಞಾ ವಿಶೇಷ ಚೇತನರೊಂದಿಗೆ ಮಧ್ಯಾಹ್ನ ಸಹಭೋಜನ ಕಾರ್ಯಕ್ರಮಗಳೊಂದಿಗೆ ಆಚರಿಸಿದರು.

ಬೆಳಿಗ್ಗೆ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್‌ನಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ವಲಯದ ಸದಸ್ಯರು ರಕ್ತದಾನ ಮಾಡಿದರು. ಬಳಿಕ ನಡೆದ ವಿಶ್ವಛಾಯಾಗ್ರಾಹಕರ ದಿನಾಚರಣಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಜಿಲ್ಲಾ ಉಪಾಧ್ಯಕ್ಷ ಲೋಕೇಶ್ ಸುಬ್ರಹ್ಮಣ್ಯ ಮಾತನಾಡಿ, ಛಾಯಾಗ್ರಹಣವು ನಮ್ಮ ಜೀವನದ ಅವಿಭಾಜ್ಯ ಅಂಗ. ಸುಂದರ ಕ್ಷಣಗಳನ್ನು ಸೆರೆ ಹಿಡಿದು ಅದನ್ನು ಅಚ್ಚಲಿಯದಂತೆ ಉಳಿಯುವಂತೆ ಮಾಡುವ ಛಾಯಾಗ್ರಾಹಕ ವೃತ್ತಿಯು ಶ್ರೇಷ್ಠವಾದುದು ಎಂದರು. ಪುತ್ತೂರು ವಲಯವು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು, ವಿಶ್ವ ಛಾಯಾಗ್ರಹಣ ದಿನ ಅಂಗವಾಗಿ ಅನ್ನದಾನ ಹಾಗೂ ರಕ್ತದಾನವನ್ನು ನಡೆಸುವ ಮೂಲಕ ಆಚರಿಸುತ್ತಿರುವುದನ್ನು ಅವರು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಲಯದ ಅಧ್ಯಕ್ಷ ನಾಗೇಶ್ ಟಿ.ಎಸ್ ಮಾತನಾಡಿ, ಛಾಯಾಗ್ರಾಕರು ಕೇವಲ ಹೊಟ್ಟೆಪಾಡಿಗಾಗಿ ವೃತ್ತಿಯಲ್ಲಿ ತೊಡಗಿಸಿಕೊಂಡಿಲ್ಲ. ವೃತ್ತಿಯ ಜೊತೆಗೆ ಸಮಾಜ ಸೇವೆಯ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿದ್ದೇವೆ. ಅಸೋಸಿಯೇಷನ್‌ನ ಸಾಧನೆಗಾಗಿ ವಲಯವು ರಾಜ್ಯ ಪ್ರಶಸ್ತಿ ಪಡೆದುಕೊಂಡಿದೆ ಎಂದ ಅವರು ಛಾಯಗ್ರಾಹಣ ದಿನದ ಅಂಗವಾಗಿ 14 ವಲಯಗಳಲ್ಲಿ ರಕ್ತದಾನ ಶಿಬಿರ ನಡೆಯುತ್ತಿದೆ ಎಂದರು.

ವಲಯದ ಗೌರವಾಧ್ಯಕ್ಷ ಹರೀಶ್ ಪುಣಚ ಮಾತನಾಡಿ, ಸಂಘಟನೆಯ ಉದ್ದೇಶ ಹಾಗೂ ಮಹತ್ವಗಳನ್ನು ತಿಳಿಸಿ ಪ್ರತಿಯೊಬ್ಬರು ಸಂಘಟನೆಯೊಂದಿಗೆ ಸಹಕರಿಸುವಂತೆ ವಿನಂತಿಸಿದರು.

ಪ್ರಶಸ್ತಿ ಪ್ರದಾನ:
ಪುತ್ತೂರು ವಲಯದ ಹಿರಿಯ ಛಾಯಾಗ್ರಾಹಕ ಕಡಬ ನವ್ಯ ಸ್ಟುಡಿಯೋದ ನಾರಾಯಣ ಗೌಡರವರಿಗೆ ಛಾಯಾ ಸೌರಭ-2023ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ನಿಯೋಜಿತ ಅಧ್ಯಕ್ಷ ರಘು ಶೆಟ್ಟಿ ಪ್ರಾರ್ಥಿಸಿದರು. ಅಧ್ಯಕ್ಷ ನಾಗೇಶ್ ಟಿ.ಎಸ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಹರೀಶ್ ಎಲಿಯ, ಚಂದ್ರಶೇಖರ ಶೆಟ್ಟಿ, ಗಣೇಶ್ ಕಟ್ಟಪುಣಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ವಲಯದ ಕಾರ್ಯದರ್ಶಿ ಪ್ರಮೋದ್ ವಂದಿಸಿದರು. ಜಿಲ್ಲಾ ಕೋಶಾಧಿಕಾರಿ ನವೀನ್ ರೈ ಪಂಜಳ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಬಿರುಮಲೆ ಬೆಟ್ಟದಲ್ಲಿರುವ ಪ್ರಜ್ಞಾ ವಿಶೇಷ ಚೇತನರ ಕೇಂದ್ರದಲ್ಲಿ ಸಹಭೋಜನ ಹಾಗೂ ವನಮಹೋತ್ಸವನ್ನು ನಡೆಸುವ ಮೂಲಕ ವಿಶ್ವಛಾಯಾಗ್ರಹಣ ದಿನವನ್ನು ಆಚರಿಸಿದರು.

Leave a Reply

error: Content is protected !!