ಅಣ್ಣಪ್ಪ ಬೆಟ್ಟದ ಕೆಳಗೆ ಪ್ರಮಾಣ ಮಾಡಿದ ಧೀರಜ್‌, ಮಲ್ಲಿಕ್, ಉದಯ್ ಜೈನ್

ಶೇರ್ ಮಾಡಿ

ಬೆಳ್ತಂಗಡಿ: 11 ವರ್ಷಗಳ ಹಿಂದೆ ಧರ್ಮಸ್ಥಳದ ಪಾಂಗಳ ನಿವಾಸಿ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಾಕಾರಣ ಪ್ರಕರಣದಲ್ಲಿ ತಮ್ಮ‌ಹೆಸರು ಬರುತ್ತಿರುವ ಹಿನ್ನೆಲೆ ಸೌಜನ್ಯ ಅವರ ತಾಯಿ ಮುಂದೆಯೇ ಇಂದು(ಆ.27) ರಂದು ಧರ್ಮಸ್ಥಳ ಅಣ್ಣಪ್ಪ ಸ್ವಾಮಿ ಬೆಟ್ಟದ ಪಾದದಲ್ಲಿ ಧೀರಜ್‌, ಮಲ್ಲಿಕ್ ಜೈನ್, ಉದಯ್ ಜೈನ್ ಆಣೆ ಪ್ರಮಾಣ ಮಾಡಿರುವ ಘಟನೆ ನಡೆಯಿತು.
ಸೌಜನ್ಯ ನ್ಯಾಯಕ್ಕಾಗಿ ವಿಶ್ವ ಹಿಂದು ಪರಿಷತ್ ಭಜರಂಗ ದಳದ ಬೆಳ್ತಂಗಡಿ ಪ್ರಖಂಡದ ವತಿಯಿಂದ ಇಂದು ಹಮ್ಮಿಕೊಂಡ ನೇತ್ರಾವತಿಯಿಂದ ಅಣ್ಣಪ್ಪ ಸ್ವಾಮಿ‌ ಬೆಟ್ಟದವರೆಗಿನ ಪಾದಯಾತ್ರೆ ಬಳಿಕ ಪ್ರಮಾಣ ಕೈಗೊಳ್ಳಲಾಯಿತು.
ಬಳಿಕ ಮಾತನಾಡಿದ ಧೀರಜ್‌, ಪ್ರಕರಣಕ್ಕೆ ಸಂಬಂಧಿಸಿದಂತೆ ದೇವರ ಮುಂದೆಯೇ ನಾವು ಪ್ರಮಾಣ ಕೈಗೊಂಡಿದ್ದೇವೆ. ನಾವು ನಿರ್ದೋಷಿಗಳೆಂದು ಸಾಬೀತಾಗಿದೆ‌. ನಮಗೂ ಕುಟುಂಬ, ಬಂಧುವರ್ಗವಿದೆ. ಆದರೆ ವಿನಾಕಾರಣ ನಮ್ಮ‌ ಹೆಸರನ್ನು ಸಮಾಜದಲ್ಲಿ ಹಾಳುಗೆಡವಲಾಗುತ್ತಿದೆ. ಇದಕ್ಕೆ ದೇವರೆ ತಕ್ಕ ಶಿಕ್ಷೆ ನೀಡಬೇಕು. ನಾವು ಈ ಹಿಂದೆ ಕಾನತ್ತೂರಿಗೂ ತೆರಳಿ ಪ್ರಾರ್ಥನೆ ಮಾಡಿದ್ದೇವೆ ಎಂದು ಹೇಳಿದರು.

ಆಣೆ ಪ್ರಮಾಣಕ್ಕೂ ಮುನ್ನ ಧರ್ಮಸ್ಥಳದಲ್ಲಿ ಜನಸ್ತೋಮ ಜಮಾಯಿಸಿದ್ದರು. ಪೊಲೀಸರು ಎಲ್ಲರನ್ನು ಶಾಂತಗೊಳಸಿ ಪರಿಸ್ಥಿತಿ ತಿಳಿಗೊಳಿಸಿದರು. ವಿಹಿಂಪ ಸಂಘಟನೆಯ 200 ಕ್ಕೂ ಅಧಿಕ ಮಂದಿ ನೇತ್ರಾವತಿ ಸ್ನಾನಘಟ್ಟದಿಂದ ಧರ್ಮಸ್ಥಳ ದ್ವಾರದವರೆಗೆ ಶಿವ ಪಂಚಾಕ್ಷರಿ ಪಠಣದೊಂದಿಗೆ ಕಾಲ್ನಡಿಗೆಯಲ್ಲಿ ಸಾಗಿ ಬಂದರು‌.
ದ.ಕ. ಎಸ್.ಪಿ. ರಿಷ್ವಂತ್ ಅವರು ಪ್ರತಿಭಟನೆಗಾರರನ್ನು ಧರ್ಮಸ್ಥಳ ದ್ವಾರದ ಬಳಿ ತಡೆದು, ಸೌಜನ್ಯ ಕುಟುಂಬಸ್ಥರು ಹಾಗೂ ವಿಹಿಂಪದ ಪ್ರಮುಖರನ್ನಷ್ಟೆ ದ್ವಾರದ ಒಳ ಪ್ರವೇಶಕ್ಕೆ ಅನುಮತಿ ಮಾಡಿಕೊಟ್ಟರು. ಮಲ್ಲಿಕ್ ಜೈನ್, ಧೀರಜ್ ಕೆಲ್ಲ, ಉದಯ್ ಜೈನ್ ಪ್ರಮಾಣ ಮಾಡುತ್ತಲೆ ಸೌಜನ್ಯ ತಾಯಿ ಕಣ್ಣೀರಿಡುತ್ತಾ ಯಾವುದೇ ಪ್ರತಿಕ್ರಿಯೆ ನೀಡದೆ ಹಿಂದಿರುಗಿದರು.
ಸೌಜನ್ಯ ತಾಯಿ ಕುಸುಮಾವತಿ ಹಾಗೂ ವಿಹಿಂಪ ಪ್ರಮುಖರು ಸೌಜನ್ಯ ಕೊಲೆ ಆರೋಪಿಗಳಿಗೆ ಶಿಕ್ಷೆಯಾಗಲಿ ಎಂದು ಅಣ್ಣಪ್ಪ ಸ್ವಾಮಿ ಮೆಟ್ಟಿಲಲ್ಲಿ ಪ್ರಾರ್ಥನೆ ಮಾಡಿದರು.

Leave a Reply

error: Content is protected !!