ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ಶಿರಾಡಿ ರಕ್ಷಿತಾರಣ್ಯದಲ್ಲಿ ರಾಜಾರೋಷವಾಗಿ ಮರಗಳ ಮಾರಣ ಹೋಮ

ಶೇರ್ ಮಾಡಿ


ನೆಲ್ಯಾಡಿ: ಉಪ್ಪಿನಂಗಡಿ ವಲಯ ವ್ಯಾಪ್ತಿಯ ಶಿರಾಡಿ, ಶಿಬಾಜೆ ಮೊದಲಾದ ಪ್ರದೇಶದಲ್ಲಿರುವ ರಕ್ಷಿತಾರಣ್ಯದಲ್ಲಿ ರಾಜಾರೋಷವಾಗಿ ಎಲ್ಲೇ ಮೀರಿದ ರೀತಿಯಲ್ಲಿ ಅರಣ್ಯ ಸಂಪತ್ತು ಕಳ್ಳರ ಪಾಲಾಗುತ್ತಿದ್ದು, ಬೃಹತ್ ಉತ್ತಮ ಜಾತಿಯ ಮರಗಳ ಮಾರಣ ಹೋಮ ನಡೆಯುತ್ತಿರುವ ಬಗ್ಗೆ ಗ್ರಾಮಸ್ಥರಿಂದ ವ್ಯಾಪಕ ದೂರುಗಳು ವ್ಯಕ್ತವಾಗಿದೆ.
ಶಿಬಾಜೆ ರಕ್ಷಿತಾರಣ್ಯದ ಸೆಕ್ಷನ್ ವ್ಯಾಪ್ತಿಯಲ್ಲಿರುವ ನೀರಾನದಿಂದ ಕುರುಂಬು, ಅರಂಪಾದೆ ಭೂತಮಜಲುನಿಂದ ಮೇಲಿನ ಕುರುಂಜ ತನಕ, ಪೆರ್ಲದ ಕಲ್ಲಾಜೆಯಿಂದ ಕೊಳಕೆ ಬೈಲು ತನಕ ರಕ್ಷಿತಾರಣ್ಯದಿಂದ ಬನ್ಪು, ಬೇಂಗ, ಹೆಬ್ಬಲಸು ಮೊದಲಾದ ಉತ್ತಮ ಜಾತಿಯ ಮರಗಳನ್ನು ರಾತ್ರಿ ಬೆಳಗಾಗುವುದರ ಒಳಗಾಗಿ ನೆಲಕ್ಕೆ ಉರುಳಿಸಲಾಗಿ ಸಾಗಾಟ ನಡೆಯುತ್ತಿರುವುದಾಗಿ ದೂರುಗಳು ವ್ಯಕ್ತವಾಗಿದೆ.
ಶಿಬಾಜೆ ಸೆಕ್ಷನ್ ವ್ಯಾಪ್ತಿಯಲ್ಲಿ ಇರುವ ನೀರಾನ ಮತ್ತು ಕುರುಂಬು ಮಧ್ಯೆ ಕೇವಲ 10 ಮೀಟರ್ ಅಂತರದಲ್ಲಿ, ಮುಖ್ಯ ರಸ್ತೆಗೆ ಕಾಣುವಂತಿದ್ದ ಮತ್ತು ಅರಣ್ಯ ಇಲಾಖಾ ಸಿಬ್ಬಂದಿಯೋರ್ವರ ಮನೆಯಿಂದ ಕೂಗಲತೆ ದೂರದಲ್ಲಿ ಬೃಹತ್ ಗಾತ್ರದ 2 ಬೇಂಗದ ಮರಗಳನ್ನು ಕಡಿದು ಹಾಕಿ 8 ಅಡಿ ಉದ್ದದ ದಿಮ್ಮಿಗಳನ್ನಾಗಿ ಮಾಡಿ ಸಾಗಾಟ ಮಾಡಿರುವ ಕೃತ್ಯದ ಕುರುಹು ಕಂಡು ಬಂದಿದೆ.
ಕಾಡಿನೊಳಗೆ ಮರ ಇರುವ ಜಾಗಕ್ಕೆ ರಾತ್ರಿ ಹೊತ್ತಿನಲ್ಲಿ ಟೆಂಪೋ ಮತ್ತು ಮರ ಕೊಯ್ಯುವ ಯಂತ್ರದೊಂದಿಗೆ 4 ರಿಂದ 5 ಜನ ಹೋಗಿ ಮರವನ್ನು ಬುಡದಿಂದಲೇ ಉರುಳಿಸಿ ಹಾಕಿ ಬಳಿಕ ಅಲ್ಲೇ ಮರವನ್ನು ತುಂಡು ಮಾಡಿ ದಿಮ್ಮಿಗಳನ್ನಾಗಿ ಮಾಡಿ ಟೆಂಪೋಗೆ ಹಾಕಲಾಗುತ್ತದೆ. ಬೆಳಗಾಗುವುದರ ಒಳಗಾಗಿ ಕಾಡಿನೊಳಗಿದ್ದ ಮರ ಮಾಯವಾಗಿರುತ್ತದೆ. ಅದರ ರೆಂಬೆ ಕೊಂಬೆಗಳನ್ನು ಅಲ್ಲೇ ಬಿಟ್ಟು ಹೋಗಿ 4 ದಿನಗಳ ಬಳಿಕ ಅದನ್ನು ಕಟ್ಟಿಗೆಯಾಗಿ ಮಾಡಿ ಪಿಕ್‍ಅಪ್ ವಾಹನದಲ್ಲಿ ಸಾಗಾಟ ಮಾಡಲಾಗುತ್ತದೆ. ಆ ಬಳಿಕ ಬುಡಕ್ಕೆ ಪೆಟ್ರೋಲ್ ಸುರಿದು ಅಲ್ಲೇ ಅದನ್ನು ಸುಟ್ಟು ಹಾಕಲಾಗಿ ಕುರುಹು ನಾಶ ಮಾಡಲಾಗುತ್ತದೆ ಎಂದು ದೂರಿಕೊಂಡಿದ್ದಾರೆ.
ಶಿಬಾಜೆ ಸೆಕ್ಷನ್ ವ್ಯಾಪ್ತಿಯಲ್ಲಿರುವ ನೀರಾನದಿಂದ ಕುರುಂಬು, ಅರಂಪಾದೆ ಭೂತಮಜಲುನಿಂದ ಮೇಲಿನ ಕುರುಂಜ ತನಕ, ಪೆರ್ಲದ ಕಲ್ಲಾಜೆಯಿಂದ ಕೊಳಕೆ ಬೈಲು ತನಕ ಸುಮಾರು 5 ಕಿ.ಮೀ. ವ್ಯಾಪ್ತಿಯ ರಕ್ಷಿತಾರಣ್ಯದ ಒಳಗಡೆ ಮರಗಳ ಲೂಟಿ ಆಗಿದ್ದು, ಈ ಪ್ರದೇಶ ಇದೀಗ ಬಯಲಿನಂತಾಗಿದೆ. ಅರಣ್ಯದ ಬದಿಯಲ್ಲಿ ರಸ್ತೆ ಇರುವ ಭಾಗದಲ್ಲಿ ಮಾತ್ರ ಮರಗಳು ಕಾಣುತ್ತಿದ್ದು, ಅವುಗಳು ಕೂಡಾ ಮಾಯಾವಾಗ ತೊಡಗಿದೆ. ಈ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಗ್ರಾಮಸ್ಥರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.


ರಕ್ಷಣೆ ಮಾಡಬೇಕಾದವರಿಂದಲೇ ಕಾಡು ಲೂಟಿ -ಕುರಿಯಕೋಸ್
ಅರಣ್ಯ ಸಿಬ್ಬಂದಿಯ ಮನೆಯ ಬಳಿಯಿಂದಲೇ ಮರಗಳನ್ನು ಕಡಿದು ಲೂಟಿ ಮಾಡಿದ್ದಾರೆ. ವನಪಾಲಕರು, ಅರಣ್ಯ ಅಧಿಕಾರಿಗಳು ಮರಕಳ್ಳರ ಜೊತೆ ಕೈಜೋಡಿಸಿಕೊಂಡು ಕೃತ್ಯ ನಡೆಯುತ್ತಿದೆಯೋ, ಕಾಡು ರಕ್ಷಣೆ ಮಾಡಬೇಕಾದವರಿಂದಲೇ ಕಾಡು ಲೂಟಿ ಆಗುತ್ತಿದೆಯೋ ಎಂಬ ಸಂಶಯ ಮೂಡತೊಡಗಿದೆ. ಇನ್ನಾದರೂ ಹಿರಿಯ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ಕಾಡಿನ ಮರ ಲೂಟಿಯನ್ನು ತಡೆಯಬೇಕಾಗಿದೆ.
-ಕುರಿಯಕೋಸ್, ಗ್ರಾಮಸ್ಥ.

 

Leave a Reply

error: Content is protected !!