ಮಾಧ್ಯಮಗಳ ಮೇಲಿನ ಎಫ್.ಐ.ಆರ್.ಗೆ ಹೈಕೋರ್ಟ್ ತಡೆ; ಪುತ್ತೂರು ಜರ್ನಲಿಸ್ಟ್ ಯೂನಿಯನ್ ಹೋರಾಟಕ್ಕೆ ಸಂದ ಜಯ

ಶೇರ್ ಮಾಡಿ

ಸುಳ್ಯ ಪೊಲೀಸರು ಮಾಧ್ಯಮಗಳ ಮೇಲೆ ದಾಖಲಿಸಿದ್ದ ಸುಳ್ಳು ಕೇಸಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ವಿಶೇಷ ಎಂದರೆ ಪೊಲೀಸರು ದಾಖಲಿಸಿರುವ ಕೇಸಿಗೆ ಮಾಧ್ಯಮ ಪ್ರತಿನಿಧಿಗಳು ಜಾಮೀನು ಪಡೆಯುವ ಮೊದಲೇ ರಾಜ್ಯ ಉಚ್ಛ ನ್ಯಾಯಾಲಯ ಪತ್ರಕರ್ತರಿಗೆ ನ್ಯಾಯ ಒದಗಿಸಿದೆ. ಇತರ ಪತ್ರಕರ್ತರ ಸಂಘದ ಸದಸ್ಯರ ಮೇಲೆ ಕೇಸು ದಾಖಲಾಗಿದ್ದರೂ ಅದು ಪರ್ಯಾಯ ಪತ್ರಕರ್ತರ ಸಂಘ ಎಂದು ಪರಿಗಣಿಸದೆ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕ ನಡೆಸಿದ್ದ ಕಾನೂನು ಹೋರಾಟಕ್ಕೆ ಜಯ ದೊರೆತಿದೆ‌.

ಆದದ್ದು ಹೀಗೆ:
ಹಿಂದೂ ಯುವತಿಯೊಂದಿಗೆ ಅನ್ಯಕೋಮಿನ ಯುವಕನೋರ್ವ ಕಾರಿನಲ್ಲಿ ಸುತ್ತಾಟ ನಡೆಸಿದ್ದಾನೆ ಎಂದು ಹಿಂದೂ ಯುವಕರ ಗುಂಪೊಂದು ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪದಲ್ಲಿ ಸುಳ್ಯ ಠಾಣಾ ಪೊಲೀಸರು ಆರೋಪಿತ ಯುವಕರನ್ನು ವಶಕ್ಕೆ ಪಡೆದಿದ್ದರು. ವಿಷಯ ಸುದ್ದಿಯಾಗುತ್ತಲೇ ಹಿಂದೂ ಫೈರ್ ಬ್ರಾಂಡ್ ನಾಯಕ ಎಂದು ಕರೆಸಿಕೊಳ್ಳುವ ಅರುಣ್ ಕುಮಾರ್ ಪುತ್ತಿಲ ಸುಳ್ಯ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾತುಕತೆ ನಡೆಸಿ ಯುವಕರನ್ನು ರಿಲೀಸ್ ಮಾಡಿದ್ದಾರೆ ಎಂದು ವೆಬ್ ಮಾಧ್ಯಮಗಳು ವರದಿ ಪ್ರಕಟಿಸಿದ್ದವು.
ಸಾಮಾಜಿಕ ಮಾಧ್ಯಮದಲ್ಲಿ ವರದಿ ಮಾಡಿ ಅಂತರ್ಜಾಲದಲ್ಲಿ ಪ್ರಕಟಿಸಿದ ಮಾಧ್ಯಮಗಳ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಸುಮೊಟೋ ಕೇಸು ದಾಖಲಾಗಿತ್ತು. ಮಾಧ್ಯಮಗಳ ಮೇಲಿನ ಕೇಸು ದಾಖಲಾತಿಯನ್ನು ಗಂಭೀರವಾಗಿ ಪರಿಗಣಿಸಿದ ಪುತ್ತೂರು ತಾಲೂಕು ಜರ್ನಲಿಸ್ಟ್ ಯೂನಿಯನ್ ಘಟಕ ಯೂನಿಯ‌ನ್ ಜಿಲ್ಲಾ ಮತ್ತು ರಾಜ್ಯ ಸಮಿತಿಯ ನಿರ್ದೇಶನದಂತೆ ಹೈಕೋರ್ಟ್ ಮೊರೆ ಹೋಗಿತ್ತು.
ಘಟನೆಗೆ ಸಂಬಂಧಪಟ್ಟ ಎಲ್ಲಾ ಸಾಕ್ಷ್ಯಧಾರಗಳ ಜೊತೆ ನೇರ ಹಾಗೂ ಸ್ಪಷ್ಟ ಮಾಹಿತಿಯನ್ನು ಭಿತ್ತರಿಸಿದ ಮಾಧ್ಯಮಗಳ ಪರವಾಗಿ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ಹೈಕೋರ್ಟಲ್ಲಿ ಈ ಬಗ್ಗೆ ವಾದ ಮಂಡಿಸಿದ್ದರು. ನ್ಯಾಯವಾದಿಗಳಾದ ಸುಯೋಗ್ ಹೇರಳೆ ಮತ್ತು ನಿಶಾಂತ್ ಕುಶಾಲಪ್ಪ ವಕಾಲತ್ತು ವಹಿಸಿದ್ದರು.ಈ ಘಟನೆಗೆ ಸಂಬಂಧಪಟ್ಟಂತೆ ಮಾಧ್ಯಮಗಳ ಮೇಲೆ ದಾಖಲಾದ ಎಫ್.ಐ.ಆರ್. ಮೇಲೆ ಹೈ ಕೋರ್ಟ್ ತಡೆಯಾಜ್ಞೆ ನೀಡಿದ್ದು, ಪತ್ರಿಕಾ ಮಾಧ್ಯಮಗಳ ಸ್ವಾತಂತ್ರ್ಯ ಹರಣಕ್ಕೆ ಮುಂದಾದ ಪೊಲೀಸ್ ಇಲಾಖೆಗೆ ಚಾಟಿ ಬೀಸಿದೆ.

Leave a Reply

error: Content is protected !!