ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಕೊಡಮಾಡುವ 2023-24ನೇ ಸಾಲಿನ ರಾಜ್ಯಮಟ್ಟದ ಉತ್ತಮ ಪ್ರಾಂಶುಪಾಲ ಪ್ರಶಸ್ತಿಗೆ ಬೆಳ್ತಂಗಡಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ಸುಕುಮಾರ ಆಯ್ಕೆಯಾಗಿದ್ದಾರೆ.
ಇವರಿಗೆ ಸೆ.5ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ರಾಜ್ಯಾದ್ಯಂತ ಸರಕಾರಿ ಪ್ರಾಥಮಿಕ ಶಾಲೆಯ 20, ಪ್ರೌಢಶಾಲೆಯ 10 ಮತ್ತು ಪದವಿಪೂರ್ವ ಕಾಲೇಜಿನ ಇಬ್ಬರು ಪ್ರಾಂಶುಪಾಲರು ಮತ್ತು ಪದವಿ ಕಾಲೇಜಿನ 8 ಉಪನ್ಯಾಸಕರಿಗೆ ಪ್ರಶಸ್ತಿ ಬಂದಿದೆ.
ಸುಕುಮಾರ್ ಅವರು ಮೂಲತಃ ಬೆಳ್ತಂಗಡಿ ತಾಲೂಕಿನ ಗರ್ಡಾಡಿಯ ಕೆಳಗಿನ ಗುತ್ತು ಬಾಲೇಶ್ವರ ಜಿನರಾಜ ಚೌಟ ಹಾಗೂ ರತ್ನಾವತಿ ದಂಪತಿಯ ಪುತ್ರ. ಗರ್ಡಾಡಿ ಸಂತ ಅಂತೋನಿ ಶಾಲೆ, ವೇಣೂರು ಸರಕಾರಿ ಪ್ರೌಢಶಾಲೆ, ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನ ಹಿರಿಯ ವಿದ್ಯಾರ್ಥಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು 1993ರಲ್ಲಿ ಬೈಂದೂರಿನ ಸರಕಾರಿ ಪ.ಪೂ. ಕಾಲೇಜಿನಲ್ಲಿ ಜೀವಶಾಸ್ತ್ರ ಉಪನ್ಯಾಸಕರಾಗಿ ನೇಮಕಗೊಂಡರು. ಬಳಿಕ ವಾಮದಪದವು, ಪುಂಜಾಲಕಟ್ಟೆ ಸರಕಾರಿ ಪ.ಪೂ. ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ 2018ರಲ್ಲಿ ಪದೋನ್ನತಿ ಹೊಂದಿ ಬೆಳ್ತಂಗಡಿ ಪ.ಪೂ. ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಥಮ ಪಿಯುಸಿ ಜೀವಶಾಸ್ತ್ರ ಪಠ್ಯಪುಸ್ತಕದ ಕನ್ನಡ ಅನುವಾದ ಸಮಿತಿಯ ಸದಸ್ಯರು. ದಕ್ಷಿಣ ಕನ್ನಡ ಜಿಲ್ಲೆಯ ಜೀವಶಾಸ್ತ್ರ ಉಪನ್ಯಾಸಕರ ಸಂಘದ ಸ್ಥಾಪಕ ಅಧ್ಯಕ್ಷರು. ಯೂಟ್ಯೂಬ್ ಚಂದನ ವಾಹಿನಿಗಳಲ್ಲಿ ಪಾಠ ಪ್ರವಚನ. ಪದವಿ ಪೂರ್ವ ಕಾಲೇಜು ಬೆಳ್ತಂಗಡಿಯಲ್ಲಿ ವಿಜ್ಞಾನ ವಿಭಾಗ ಆರಂಭ ಮತ್ತು ಅಭಿವೃದ್ಧಿಗೋಸ್ಕರ ವಿವಿಧ ಸಂಘ ಸಂಸ್ಥೆಗಳ ಸಹಾಯ ವಿವಿಧ ಬ್ಯಾಂಕುಗಳ ಸಿಎಸ್‌ಆರ್‌ಫಂಡಗಳನ್ನು ಬಳಸಿಕೊಂಡು ಕಾಲೇಜನ್ನು ಅಭಿವೃದ್ಧಿಪಡಿಸಿರುವುದು ಇವರ ಹೆಗ್ಗಳಿಕೆಯಾಗಿದೆ. ಜತೆಗೆ ಉತ್ತಮ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.