ಬೆಳ್ತಂಗಡಿಯಲ್ಲಿ ಬೃಹತ್ ಸಮಾವೇಶ – ಸೆರಗೊಡ್ಡಿ ನೆರೆದವರಲ್ಲಿ ನ್ಯಾಯ ಬೇಡಿದ ಸೌಜನ್ಯ ತಾಯಿ

ಶೇರ್ ಮಾಡಿ

ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನೈಜ ಆರೋಪಿಗಳ ಪತ್ತೆಗೆ ಒತ್ತಾಯಿಸಿ ಭಾನುವಾರ ಬೆಳ್ತಂಗಡಿಯಲ್ಲಿ ಬೃಹತ್ ಸಮಾವೇಶ ನಡೆಸಲಾಯಿತು. ಈ ವೇಳೆ ಸೌಜನ್ಯ ತಾಯಿ ಕುಸುಮಾವತಿ ವೇದಿಕೆಯಿಂದ ಕೆಳಗಿಳಿದು ಸೆರಗೊಡ್ಡಿ ನೆರೆದವರಲ್ಲಿ ನ್ಯಾಯ ಬೇಡಿದ್ದಾರೆ.

ಈ ವೇಳೆ ಮಾತನಾಡಿದ ಅವರು, ನನ್ನ ಮಗಳಿಗೆ ನ್ಯಾಯ ಕೊಡಿಸಲು ಇಡೀ ದೇಶವೇ ಕೂಡಿ ಬಂದಿದೆ. ನನ್ನ ಮಗಳಿಗೋಸ್ಕರ ಇಷ್ಟೊಂದು ಜನ ಸೇರಿದ್ದೀರಿ. ನಮ್ಮ ಮಗುವಿಗೋಸ್ಕರ ನ್ಯಾಯ ಕೇಳಲು ಇಂದು ನಮಗೆ ಪರ್ಮಿಷನ್ ಕೊಟ್ಟಿಲ್ಲ. ಬಜರಂಗದಳದವರೊಂದಿಗೆ ಅಣ್ಣಪ್ಪನಲ್ಲಿ ನ್ಯಾಯ ಕೇಳಲು ಹೋಗಿದ್ದೆ. ನನ್ನನ್ನು ಒಳಗೆ ಹೋಗಲು ಬಿಟ್ಟಿಲ್ಲ. ನನ್ನನ್ನು ಒಂದು ಗಂಟೆ ಹೊರಗಡೆ ಕಾಯಿಸಿದ್ದಾರೆ ಎಂದು ನೋವು ತೋಡಿಕೊಂಡರು.

ಆ ಅಣ್ಣಪ್ಪ ಸ್ವಾಮಿ ಮಂಜುನಾಥ ಸ್ವಾಮಿಯನ್ನು ನಾನು ಇಲ್ಲಿ ನೋಡುತ್ತಿದ್ದೇನೆ. ಖಂಡಿತಾ ನಾನು ಗಟ್ಟಿಯಾಗಿ ಇದ್ದೇನೆ. ಇಷ್ಟು ಜನರ ಶಕ್ತಿ ನನ್ನಲ್ಲಿ ತುಂಬಿದೆ. ಅದು ಎಷ್ಟು ಬಾರಿ ನನ್ನ ಮಗಳನ್ನು ಅತ್ಯಾಚಾರ ಮಾಡಿದ್ರೋ, ನನ್ನ ಮಗಳು ಎಷ್ಟು ನೋವು ತಿಂದಳೋ, 5-6 ಜನ ಅತ್ಯಾಚಾರ ಮಾಡಿದ್ದಾರೆ. ನ್ಯಾಯ ಸಿಗುತ್ತೆ, ಅತ್ಯಾಚಾರಿಗಳು ಸಿಗುತ್ತಾರೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಮ್ಮ ನನ್ನನ್ನು ಬದುಕಿಸು ಎಂಬ ಕೂಗು ನನಗೆ ಈಗಲೂ ಕೇಳಿಸುತ್ತೆ. ಅತ್ಯಾಚಾರ ಮಾಡಿ ಕಾಡಲ್ಲಿ ಬಿಸಾಡಿದ್ದಾರೆ. ಅತ್ಯಾಚಾರ ಮಾಡಿ ಬಿಟ್ಟಿದ್ರೂ ತೊಂದರೆ ಇರುತ್ತಿರಲಿಲ್ಲ. ಆದರೆ ಕೊಂದೇ ಬಿಟ್ಟರು. ಇವತ್ತು ನಿಮ್ಮ ಕಾಲ ಬುಡಕ್ಕೆ ಬಂದು ನ್ಯಾಯ ಕೇಳುತ್ತಿದ್ದೇನೆ. ಯಾವುದೇ ಹಣದ ಆಮಿಷಕ್ಕೆ ನ್ಯಾಯವನ್ನು ಬಲಿ ಕೊಡಬೇಡಿ ತಾಯಂದಿರೆ ಎಂದು ಮನವಿ ಮಾಡಿಕೊಂಡರು.

ಪ್ರಜಾಪ್ರಭುತ್ವ ವೇದಿಕೆ ಹಾಗೂ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ಸೌಜನ್ಯ ಪರ ನ್ಯಾಯಕ್ಕಾಗಿ ಇಂದು ಬೆಳ್ತಂಗಡಿಯಲ್ಲಿ ಬೃಹತ್ ಸಮಾವೇಶ ನಡೆದಿದೆ. ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ಸಮಾವೇಶ ನಡೆದಿದೆ. ಪ್ರತಿಭಟನೆಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ನ್ಯಾಯಾಲಯದ ಸುಪರ್ದಿಯಲ್ಲಿ ಸೌಜನ್ಯ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಪ್ರತಿಭಟನೆ.

Leave a Reply

error: Content is protected !!