ಆಸ್ಪತ್ರೆಯೊಂದರಲ್ಲಿ ಮೊಬೈಲ್ ಟಾರ್ಚ್ ಲೈಟ್ ಬಳಸಿಕೊಂಡು ರೋಗಿಯನ್ನು ಪರೀಕ್ಷೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಮಾನ್ಯಂ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.
ಆಂಧ್ರದಲ್ಲಿ ಕಳೆದ ಕೆಲ ದಿನಗಳಿಂದ ವಿದ್ಯುತ್ ಕಡಿತಗೊಳ್ಳುತ್ತಿದ್ದು, ಇದಕ್ಕೆ ತುರ್ತು ಲೋಡ್ ಶೆಡ್ಡಿಂಗ್ ಕಾರಣ ಎನ್ನಲಾಗಿದೆ. ಇದರ ಪರಿಣಾಮ ಆಸ್ಪತ್ರೆಗೂ ತಟ್ಟಿದ್ದು, ಮೊಬೈಲ್ ಲೈಟ್ ಬಳಸಿಕೊಂಡು ರೋಗಿಯನ್ನು ಪರೀಕ್ಷೆ ಮಾಡಿದ ಘಟನೆಯೊಂದು ನಡೆದಿದೆ.
ಶುಕ್ರವಾರ ಸಂಜೆ (ಸೆ. 1ರಂದು) ಬ್ರೇಕ್ ವೈಫಲ್ಯಗೊಂಡು ಆಟೋ ರಿಕ್ಷಾವೊಂದು ಪಲ್ಟಿಯಾದ ಪರಿಣಾಮ 8 ಮಂದಿ ಗಾಯಗೊಂಡಿದ್ದರು. 8 ಮಂದಿಯಲ್ಲಿ ಇಬ್ಬರು ಗಂಭೀರ ಗಾಯಗೊಂಡ ಕಾರಣ ಅವರನ್ನು ಆಂಧ್ರ ಪ್ರದೇಶದ ಕುರುಪಂ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಆದರೆ ವಿದ್ಯುತ್ ಕಡಿತಗೊಂಡ ಕಾರಣ ಗಾಯಾಳುಗಳನ್ನು ಪರೀಕ್ಷೆ ಮಾಡಿಸಲು, ಅವರ ಗಾಯಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲು ಆಸ್ಪತ್ರೆಯ ಸಿಬ್ಬಂದಿಗಳು ಮೊಬೈಲ್ ಟಾರ್ಚ್ ಉಪಯೋಗಿಸಿದ್ದಾರೆ. ಒಂದು ಕೈಯಲ್ಲಿ ಮೊಬೈಲ್ ಪ್ಲ್ಯಾಶ್ ಲೈಟ್ ಬಳಸಿ, ಇನ್ನೊಂದು ಕೈಯಲ್ಲಿ ಗಾಯಕ್ಕೆ ಚಿಕಿತ್ಸೆಯನ್ನು ಆಸ್ಪತ್ರೆಯ ಸಿಬ್ಬಂದಿಗಳು ನೀಡಿದ್ದಾರೆ.
ಆಂಧ್ರಪ್ರದೇಶದಲ್ಲಿ ಕಳೆದ ಕೆಲ ಸಮಯದಿಂದ ಲೋಡ್ ಶೆಡ್ಡಿಂಗ್ ಸಮಸ್ಯೆ ತಲೆದೋರಿದೆ. ಬೇಸಿಗೆಯ ಪ್ರಭಾವದಿಂದ ಈ ಬಿಕ್ಕಟ್ಟು ಉಂಟಾಗಿದೆ ಎಂದು ವರದಿಯಾಗಿದೆ.