ನೆಲ್ಯಾಡಿ: ಶ್ರೀರಾಮ ವಿದ್ಯಾಲಯ, ಶ್ರೀರಾಮ ಶಿಶುಮಂದಿರ, ಶ್ರೀರಾಮ ಗ್ರಾಮ ವಿಕಾಸ ಸಮಿತಿ ನೆಲ್ಯಾಡಿ ಇದರ ಜಂಟಿ ಅಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯಕ್ತ ಪುಟಾಣಿಗಳಿಗೆ “ಶ್ರೀ ಕೃಷ್ಣ ಲೋಕ” ಉತ್ಸವವನ್ನು ಆಯೋಜಿಸಲಾಯಿತು.
ಮುಖ್ಯ ಅತಿಥಿಗಳಾಗಿ ಪಡುಬೆಟ್ಟು ವಿಷ್ಣುಮೂರ್ತಿ ದೇವಾಲಯದ ಅರ್ಚಕರಾದ ಆದಿತ್ಯ ಭಟ್ ಮತ್ತು ಪತ್ನಿ ಶ್ರೀಮತಿ ಅಖಿಲ ದಂಪತಿ ಶ್ರೀಕೃಷ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಕೃಷ್ಣ ಸಂದೇಶವನ್ನು ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಪುಟ್ಟ ಶ್ಯಾಮನನ್ನು ತೊಟ್ಟಿಲಲ್ಲಿ ಮಲಗಿಸಿ ಲಾಲಿಸಿ ಕೃಷ್ಣ -ರಾಧೆ ವೇಷಧಾರಿ ಪುಟಾಣಿಗಳಿಗೆ ಆರತಿ ಎತ್ತಲಾಯಿತು.
ವೇದಿಕೆಯಲ್ಲಿ ವಿದ್ಯಾಲಯದ ಆಡಳಿತ ಮಂಡಳಿಯ ಕೋಶಾಧಿಕಾರಿಗಳಾದ ಜಿನ್ನಪ್ಪ ಪೂವಾಜೆ, ಶ್ರೀರಾಮ ಗ್ರಾಮವಿಕಾಸ ಸಮಿತಿಯ ಅಧ್ಯಕ್ಷರಾದ ಗಂಗಾಧರ ಶೆಟ್ಟಿ ಕೊಲ್ಯೊಟ್ಟು, ಮುಖ್ಯ ಶಿಕ್ಷಕರಾದ ಗಣೇಶ್ ವಾಗ್ಲೆ ಉಪಸ್ಥಿತರಿದ್ದರು.
ಗಂಗಾಧರ ಶೆಟ್ಟಿ ಕೊಲ್ಯೊಟ್ಟು ಸ್ವಾಗತಿಸಿ, ಗಣೇಶ್ ವಾಗ್ಲೆ ಧನ್ಯವಾದವಿತ್ತರು. ಶ್ರೀಮತಿ ರೋಹಿಣಿ ಕಾರ್ಯಕ್ರಮ ನಿರೂಪಿಸಿದರು.
ಕೃಷ್ಣ ವೇಷಧಾರಿ ಪುಟಾಣಿಗಳು ಮಡಕೆ ಒಡೆಯುವ ಮೂಲಕ ಆಟೋಟ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಿ ಬಹುಮಾನಗಳನ್ನು ವಿತರಿಸಲಾಯಿತು.