ವಂಚನೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಚೈತ್ರಾ ಕುಂದಾಪುರಳಿಗೆಆಶ್ರಯ ನೀಡಿದ್ದ ಕಾಂಗ್ರೆಸ್ ಮಾಧ್ಯಮ ವಕ್ತಾರೆ ಅಂಜುಮ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ.
ಬಿಜೆಪಿ ಶಾಸಕ ಸ್ಥಾನದ ಟಿಕೆಟ್‍ಗಾಗಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರ ಬಳಿ 5 ಕೋಟಿ ರೂ. ಪಡೆದು ವಂಚಿಸಿದ್ದಾಳೆ ಎಂಬ ಆರೋಪದ ಮೇಲೆ ಚೈತ್ರಾಳನ್ನು ಹಾಗೂ ಆಕೆಯ ಸ್ನೇಹಿತ ಶ್ರೀಕಾಂತ ನಾಯ್ಕ್ ಬಂಧಿಸಲಾಗಿದೆ. ಆಕೆ ಕಳೆದ ಒಂದು ವಾರದಿಂದ ತಲೆಮರೆಸಿಕೊಂಡಿದ್ದಳು. ಕಾಂಗ್ರೆಸ್ ಮಾಧ್ಯಮ ವಕ್ತಾರೆ ಅಂಜುಮ್ ಅವರ ಅಪಾರ್ಟ್‍ಮೆಂಟ್‍ನಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಅಡಗಿಕೊಂಡಿದ್ದಳು.
ಅಂಜುಮ್ ಚೈತ್ರಾಳ ಸ್ನೇಹಿತೆಯಾಗಿದ್ದು ಈ ಹಿಂದೆ ಇಬ್ಬರು ಸಹೋದ್ಯೋಗಿಯಾಗಿದ್ದರು. ಆರೋಪಿಗೆ ಆಶ್ರಯ ನೀಡಿದ ವಿಚಾರವಾಗಿ ಅಂಜುಮ್ ಅವರಿಗೆ ಸಿಸಿಬಿ ಈಗ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಬಂಧನಕ್ಕೊಳಗಾಗಿರುವ ಆರೋಪಿಗಳನ್ನು ಬೆಂಗಳೂರಿಗೆ ಕರೆತರಲಾಗುತ್ತಿದ್ದು, ಸಂಜೆಯ ವೇಳೆಗೆ ಕೋರ್ಟ್‍ಗೆ ಹಾಜರುಪಡಿಸಿ ಮುಂದಿನ ಕ್ರಮಕೈಗೊಳ್ಳಲು ಪೊಲೀಸರು ತಿರ್ಮಾನಿಸಿದ್ದಾರೆ. ಆರೋಪಿ ಚೈತ್ರಾ ಬಂಧನದ ಬಳಿಕ ಒಡೆದ ಬಳೆ ಹಾಗೂ ಉಂಗುರವನ್ನು ನುಂಗಲು ಯತ್ನಿಸಿದ್ದಳು. ಇದರಿಂದಾಗಿ ಪೊಲೀಸ್ ಸಿಬ್ಬಂದಿ ಆಕೆಯನ್ನು ಅಜ್ಞಾತ ಸ್ಥಳದಲ್ಲಿ ರಾತ್ರಿ ಪೂರ್ತಿ ಕಾವಲು ಕಾದಿದ್ದಾರೆ.
ವಂಚನೆ ವಿಚಾರವಾಗಿ ಗೋವಿಂದ ಬಾಬು ಪೂಜಾರಿ ಬೆಂಗಳೂರಲ್ಲಿ ದೂರು ನೀಡಿದ್ದರು. ಪ್ರಕರಣ ಸಂಬಂಧ ಈವರೆಗೆ ನಾಲ್ವರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.