ಲೋಕಸಭಾ ಚುನಾವಣೆ ಸಮೀಪಿಸಲಿ. ಮೋದಿ ಅವರು ಮತ್ತೆ ಪ್ರಧಾನಿ ಆಗುತ್ತಾರಾ ಅಥವಾ ಇಲ್ಲವಾ ಎಂಬ ಬಗ್ಗೆ ಅವತ್ತೇ ಹೇಳುವೆ ಎಂದು ಕೋಡಿಮಠ ಮಹಾಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.
ದಾವಣಗೆರೆಯ ಹೊನ್ನಾಳಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಬಳಿಕ ಒಂದು ಪಕ್ಷ ಆಡಳಿತ ನಡೆಸುತ್ತದೆ ಎಂದು ಹೇಳಿದ್ದೆ. ನಾನು ಹೇಳಿದಂತೆಯೇ ಆಗಿದೆ. ಅದರಂತೆ ಅವಘಡಗಳಿದ್ದಾವೆ. ಅ ಅವಘಡಗಳು ಕಳೆಯಬೇಕು. ಅ ಬಳಿಕ ಮುಂದಿನ ಭವಿಷ್ಯ ಹೇಳುವೆ ಎಂದು ತಿಳಿಸಿದ್ದಾರೆ.
ಗುರುಗಳಲ್ಲಿ ಸಮಾಜಕಾರಕ ಹಾಗೂ ಮೋಕ್ಷಕಾರಕ ಗುರುಗಳಿದ್ದಾರೆ. ಜಾತಿಗಳು ಮನೆಯಲ್ಲಿರಬೇಕು. ಧರ್ಮ ಹೊರಗಡೆ ಇರಬೇಕು. ಆಗ ಶಾಂತಿ ಇರುತ್ತದೆ. ಮನುಷ್ಯನಿಗೆ ಯಾವುದು ಶಾಂತಿ, ನೆಮ್ಮದಿ ನೀಡುತ್ತದೆಯೋ ಅದು ಧರ್ಮವಾಗುತ್ತದೆ. ನೀರಿನ ಮೇಲೆ ದೋಣಿ ಇರಬೇಕೇ ಹೊರತು ದೋಣಿಯೊಳಗೆ ನೀರು ಬಂದರೆ ಆಪಾಯ ತಪ್ಪದು ಎಂದು ಸೂಚ್ಯವಾಗಿ ಹೇಳಿದ್ದಾರೆ.
ಕಾರ್ತಿಕ ಮಾಸ, ಸಂಕ್ರಾಂತಿ ಸಂದರ್ಭದಲ್ಲಿ ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಕೆಲ ಅವಘಡಗಳು ಎದುರಾಗಲಿವೆ. ರಾಜ್ಯ-ರಾಷ್ಟ್ರದಲ್ಲಿ ನಡೆಯುವ ಅವಘಡಗಳಿಂದ ಪಾರು ಮಾಡಿದರೆ ಮುಂದಿನ ಭವಿಷ್ಯ ಹೇಳುವೆ ಎಂದು ಮಾತನಾಡಿದ್ದಾರೆ.
ರಾಜ್ಯದಲ್ಲಿ ಅಮಾವಾಸ್ಯೆ ಬಳಿಕ ಮಳೆ ಬರುತ್ತದೆ. ಆತಂಕ ಪಡುವ ಅಗತ್ಯವಿಲ್ಲ. ಅನೇಕ ತಪ್ಪು-ಒಪ್ಪುಗಳು ಪ್ರಾಣಿಗಳಲ್ಲಾಗುತ್ತಿದೆ. ಮನುಷ್ಯನಲ್ಲೂ ಸಾಕಷ್ಟು ತಪ್ಪುಗಳಾಗುತ್ತಿವೆ. ಮನುಷ್ಯ ಎಷ್ಟೇ ತಪ್ಪುಗಳನ್ನು ಮಾಡಿದರೂ, ಆ ಭಗವಂತ ಕ್ಷಮಿಸುತ್ತಾನೆ. ಆದರೆ ಮನುಷ್ಯ ತಾನೇ ಮಾಡಿದ ಪಾಪ ಕರ್ಮಗಳನ್ನು ತಿಳಿದೂ ತಪ್ಪು ಮಾಡಿದರೆ ಕ್ಷಮಿಸಲಾರ. ಮನುಷ್ಯ ಅಜ್ಞಾನದಲ್ಲಿ ಉಳಿದಿದ್ದಾನೆ. ಇತ್ತೀಚಿನ ದಿನಗಳಲ್ಲಿ ಗೊತ್ತಿದ್ದೂ ಮನುಷ್ಯ ಪ್ರಕೃತಿ, ನೆಲ, ಜಲವನ್ನು ನಿರಂತರವಾಗಿ ದುರುಪಯೋಗ ಪಡಿಸಿಕೊಳ್ಳುತ್ತಿರುವ ಕಾರಣ ಇಂದು ನಾವು ಅನೇಕ ರೀತಿಯ ಪ್ರಕೃತಿ ವಿಕೋಪಗಳನ್ನು ಕಾಣುತ್ತಿದ್ದೇವೆ. ಅದರೂ ಈ ಬಾರಿ ಮಳೆ ಆಗಲಿದೆ. ಏನೂ ತೊಂದರೆ ಇಲ್ಲ. ಕರ್ನಾಟಕ ಸಂಪದ್ಭರಿತ ರಾಜ್ಯ ಆಗಿದ್ದರಿಂದ ಎಲ್ಲ ಒಳ್ಳೆಯದಾಗಲಿದೆ ಎಂದು ತಿಳಿಸಿದ್ದಾರೆ.