
ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಕೋಟಿ ಕೋಟಿ ವಂಚಿಸಿರುವ ಚೈತ್ರಾ ಕುಂದಾಪುರ ಗ್ಯಾಂಗ್ ವಿರುದ್ಧದ ತನಿಖೆ ಚುರುಕುಗೊಂಡಿದೆ. ತನಿಖಾಧಿಕಾರಿಗಳು ಪ್ರಕರಣ ನಡೆದ ಸ್ಥಳಗಳ ಮಹಜರು ನಡೆಸಿದ್ದಾರೆ.
ಈಗಾಗಲೇ ಮಂಗಳೂರಿಗೆ ತೆರಳಿರುವ ಅಧಿಕಾರಿಗಳು ಮೂರು ಸ್ಥಳಗಳಲ್ಲಿ ಮಹಜರು ನಡೆಸಲಿದ್ದಾರೆ. ಉದ್ಯಮಿಯನ್ನು ಭೇಟಿಯಾದ ಜಾಗ, ಮಾತುಕತೆ ನಡೆದ ಜಾಗ ಹಾಗೂ ಹಣ ಪಡೆದ ಜಾಗಗಳ ಮಹಜರು ನಡೆಯಲಿದೆ. ಈಗಾಗಲೇ ವಂಚಕರ ಗ್ಯಾಂಗ್ ಉದ್ಯಮಿಯನ್ನು ಭೇಟಿಯಾದ ಬೆಂಗಳೂರಿನ ನಾರಾಯಣ ಗುರು ಕೋ ಅಪರೇಟಿವ್ ಬ್ಯಾಂಕ್, ಗೋವಿಂದ ಬಾಬು ಕಚೇರಿ ಹಾಗೂ ಕುಮಾರ ಕೃಪಾದಲ್ಲಿ ಸಿಸಿಬಿ ಪೊಲೀಸರು ಮಹಜರು ಮಾಡಿದ್ದಾರೆ. ಈ ವೇಳೆ ಸ್ಥಳದಲ್ಲಿ ಪ್ರಕರಣಕ್ಕೆ ಸಂಬಂಧಪಟ್ಟ ಒಂದಷ್ಟು ದಾಖಲೆಗಳ ಮಾಹಿತಿಯನ್ನು ಸಿಸಿಬಿ ಪೊಲೀಸರು ಕಲೆಹಾಕಿದ್ದರು.
ಕುಮಾರ ಕೃಪಾದಲ್ಲಿ ಆರೋಪಿಗಳು ಚೆನ್ನನಾಯ್ಕ್ ಹೆಸರಲ್ಲಿ ನಕಲಿ ಪಾತ್ರಧಾರಿಯನ್ನು ಸೃಷ್ಟಿಸಿ ನಾಟಕವಾಡಿದ್ದರು. ಈ ವೇಳೆ ಕೇಂದ್ರ ಚುನಾವಣಾ ಸಮಿತಿ ಸದಸ್ಯರು ಬಂದಿದ್ದಾರೆ ಎಂದು ಕತೆ ಹೆಣೆದಿದ್ದರು. ಈಗ ತನಿಖೆ ಚುರುಕುಗೊಂಡಿದ್ದು ಮತ್ತಷ್ಟು ಮಹತ್ವದ ಮಾಹಿತಿಗಳು ಸಂಗ್ರಹದ ಬಳಿಕ ಪ್ರಕರಣದ ಮತ್ತಷ್ಟು ವಿಚಾರಗಳು ಬೆಳಕಿಗೆ ಬರಲಿವೆ.
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಕುಂದಾಪುರ ಗೆಳೆಯ ಶ್ರೀಕಾಂತ್ ವಿರುದ್ಧ ಮತ್ತೊಂದು ಸೆಕ್ಷನ್ ದಾಖಲಾಗಿದೆ. ಬಂಡೆಪಾಳ್ಯ ಠಾಣೆಯಲ್ಲಿ ಸಿಸಿಬಿ ಪೊಲೀಸರು ಐಪಿಸಿ ಸೆಕ್ಷನ್ 201ನ್ನು ಹೊಸದಾಗಿ ಸೇರಿಸಿದ್ದಾರೆ. ಸಿಸಿಬಿ ತನಿಖೆ ವೇಳೆ ಚೈತ್ರಾ ಹಾಗೂ ಗೆಳೆಯ ಆರೋಪಿ ಶ್ರೀಕಾಂತ್ ಕಳ್ಳಾಟ ಬಯಲಾಗಿದ್ದು, ಶ್ರೀಕಾಂತ್ ಮೊಬೈಲ್ ಸಂಪೂರ್ಣ ನಾಶ ಮಾಡಲಾಗಿದೆ ಎಂಬ ವಿಚಾರ ತಿಳಿದುಬಂದಿದೆ.



