ಉದ್ಯಮಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಕುಂದಾಪುರ ಮತ್ತು ತಂಡ 5 ಕೋಟಿ ರೂ. ವಂಚಿಸಿ ಇದೀಗ ಬಂಧನಕ್ಕೊಳಗಾಗಿದ್ದಾರೆ. ಈ ಕುರಿತು ಸಿಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಇದುವರೆಗೂ 3 ಕೋಟಿ ರೂ. ಮೌಲ್ಯದಷ್ಟು ನಗದು ಮತ್ತು ಚಿನ್ನವನ್ನು ಜಪ್ತಿಪಡಿಸಿಕೊಂಡಿದ್ದಾರೆ.
ಯಾರಿಂದ ಎಷ್ಟು ಜಪ್ತಿ?: ಚೈತ್ರಾ ಕುಂದಾಪುರ ತನ್ನ ಸಂಬಂಧಿಕರ ಹೆಸರಲ್ಲಿ ಖಾಸಗಿ ಬ್ಯಾಂಕ್‌ನಲ್ಲಿ 1.8 ಕೋಟಿ ರೂ. ಠೇವಣಿ ಇಟ್ಟಿದ್ದು, ಸಿಸಿಬಿ ಅಧಿಕಾರಿಗಳು ಈ ಹಣವನ್ನು ಜಪ್ತಿಪಡಿಸಿಕೊಂಡಿದ್ದಾರೆ. ಅಲ್ಲದೇ ಚೈತ್ರಾ ಮನೆಯಲ್ಲಿದ್ದ 65 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಸಹಾ ಜಪ್ತಿ ಮಾಡಿದ್ದಾರೆ. ಉಪ್ಪೂರು ಶ್ರೀರಾಮ್ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ಚೈತ್ರಾ ಕುಂದಾಪುರ ಬಾವ ಮ್ಯಾನೇಜರ್ ಆಗಿದ್ದರು. ಅವರ ಸಹಾಯದ ಮೂಲಕ ಶ್ರೀರಾಮ್ ಬ್ಯಾಂಕ್‌ನಲ್ಲಿ ಚೈತ್ರಾ 40 ಲಕ್ಷ ರೂ. ಹಣವನ್ನು ಇಟ್ಟಿದ್ದಳು. ಈ ಹಣವನ್ನೂ ಅಧಿಕಾರಿಗಳು ವಶಕ್ಕೆ ಪಡಿದಿದ್ದಾರೆ.
ಚೈತ್ರಾಳ ಗೆಳೆಯ ಶ್ರೀಕಾಂತ್ ನಾಯಕ್ ಖಾತೆಯಲ್ಲಿದ್ದ 45 ಲಕ್ಷ ರೂ. ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇನ್ನು ಅಭಿನವ ಹಾಲಶ್ರೀ ಸ್ವಾಮೀಜಿ ಈಗಾಗಲೇ 50 ಲಕ್ಷ ರೂ. ನಗದನ್ನು ಗೋವಿಂದ ಪೂಜಾರಿಗೆ ಹಿಂದಿರುಗಿಸಿದ್ದಾರೆ. ಸದ್ಯ ಚೈತ್ರಾ ಖರೀದಿ ಮಾಡಿದ್ದ ಕಿಯಾ ಕಾರನ್ನು ಸಿಸಿಬಿ ವಶಕ್ಕೆ ಪಡೆದಿದೆ. ಸುಮಾರು 3.30 ಕೋಟಿ ರೂ. ಮೌಲ್ಯದ ಕಾರು, ಚಿನ್ನಾಭರಣ ಹಾಗೂ ನಗದನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಉಳಿದ ಹಣಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.