ಬೆಳ್ಳಂಬೆಳ್ಳಗ್ಗೆ ಕುಡಿದು ಕರ್ತವ್ಯಕ್ಕೆ ಹಾಜರಾದ ಸರ್ಕಾರಿ ವೈದ್ಯ: ರೆಡ್ ಹ್ಯಾಂಡ್ ಆಗಿ ಹಿಡಿದ ಸಾರ್ವಜನಿಕರು

ಶೇರ್ ಮಾಡಿ

ಸರ್ಕಾರಿ ಆಸ್ಪತ್ರೆ ವೈದ್ಯರೊಬ್ಬರು ಪ್ರತಿದಿನ ಕುಡಿದು ಕರ್ತವ್ಯಕ್ಕೆ ಹಾಜರಾಗುತ್ತಿರುವಂತಹ ಘಟನೆ ಜಿಲ್ಲೆಯ ಪಾವಗಡ ತಾಲೂಕಿನ ಕೋಟಗುಡ್ಡ ಗ್ರಾಮದಲ್ಲಿ ನಡೆದಿದೆ. ಕೋಟಗುಡ್ಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ರಾಮಾಂಜಿನಪ್ಪ ಕುಡಿದು ಕರ್ತವ್ಯಕ್ಕೆ ಬರುತ್ತಿದ್ದ ವೈದ್ಯ. ಪ್ರತಿನಿತ್ಯ ಕುಡಿದು ಬಂದೇ ಡಾ. ರಾಮಾಂಜಿನಪ್ಪ ಡ್ಯೂಟಿಗೆ ಹಾಜರಾಗುತ್ತಿದ್ದರು. ಈ ಬಗ್ಗೆ ಹಲವಾರು ಮೇಲಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಇಂದು ಬೆಳಿಗ್ಗೆ ಕೂಡ ಆಸ್ಪತ್ರೆ ಆವರಣದಲ್ಲೇ ಇರುವ ವಸತಿ ನಿಲಯದಲ್ಲಿ ಡಾ. ರಾಮಾಂಜಿನಪ್ಪ ಕುಡಿಯುತ್ತ ಕುಳಿತಿರುವಾಗ ಗ್ರಾಮಸ್ಥರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇಂದು ಕರ್ತವ್ಯಕ್ಕೆ ಬಾರದಿದ್ದರು ಸಹ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿದ್ದಾರೆ. ಹೀಗಾಗಿ ಆಸ್ಪತ್ರೆಗೆ ಬೀಗ ಹಾಕಿ ಕೋಟಗುಡ್ಡ ಗ್ರಾಮಸ್ಥರು ಪ್ರತಿಭಟನೆ ಮುಂದಾಗಿದ್ದರು.

ತಕ್ಷಣವೇ ಕುಡುಕ ವೈದ್ಯನನ್ನ ವಜಾ ಮಾಡುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ಆದರೆ ವೈದ್ಯ ರಾಮಾಂಜಿನಪ್ಪಗೆ ತಾಲೂಕು ವೈದ್ಯಾಧಿಕಾರಿ ಸಾಥ್ ನೀಡುತ್ತಿರುವುದಾಗಿ ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಬೆಳಿಗ್ಗೆ 9 ರಿಂದ ಪ್ರತಿಭಟನೆ ಮಾಡುತ್ತಿದ್ದರೂ ಟಿಎಚ್ಓ ಮೇಲೆ ಕ್ರಮ ಕೈಗೊಳ್ಳದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

error: Content is protected !!