ಚೈತ್ರಾ ಕುಂದಾಪುರ ಗ್ಯಾಂಗ್ನಿಂದ ಉದ್ಯಮಿಗೆ 5 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದಲ್ಲಿರುವ ಹಾಲಸ್ವಾಮಿ ಮಠಕ್ಕೆ ಅನಾಮಿಕ ವ್ಯಕ್ತಿಯೊಬ್ಬರು 56 ಲಕ್ಷ ರೂಪಾಯಿ ನೀಡಿ ತೆರಳಿದ್ದಾರೆ. ಅನಾಮಿಕ ವ್ಯಕ್ತಿಯ ಹೆಸರು ಪ್ರಣವ್ ಪ್ರಸಾದ್ ಎನ್ನಲಾಗುತ್ತಿದೆ. ಈ ಕುರಿತಾಗಿ ವಿಡಿಯೋ ಹೇಳಿಕೆ ನೀಡಿರುವ ಪ್ರಣವ್, ತಾನು ವಕೀಲನೆಂದು ಹೇಳಿಕೊಂಡಿದ್ದಾರೆ. 56 ಲಕ್ಷ ರೂ. ಹಣ ಅಭಿನವ ಹಾಲಶ್ರೀಗೆ ಸೇರಿದ್ದು ಎಂದಿದ್ದಾರೆ.
ಖುದ್ದು ಹಾಲಸ್ವಾಮಿ ಮಠಕ್ಕೆ ತೆರಳಿ ಹಣ ನೀಡಿದ ಪ್ರಣವ್ ಪ್ರಸಾದ್
ಅಭಿನವ ಹಾಲಶ್ರೀ ಕಾರು ಚಾಲಕ ಮೈಸೂರಿನಲ್ಲಿ ನನಗೆ ಹಣ ನೀಡಿದ್ದರು. ಒಟ್ಟು 60 ಲಕ್ಷ ರೂ. ತಂದು ಈ ಪೈಕಿ 56 ಲಕ್ಷ ರೂ. ನನಗೆ ತಲುಪಿಸಿದ್ದರು. ಉಳಿದ 4 ಲಕ್ಷ ರೂ. ವಕೀಲರ ಶುಲ್ಕಕ್ಕಾಗಿ ಕಾರು ಚಾಲಕ ಪಡೆದುಕೊಂಡಿದ್ದಾರೆ. ಮೈಸೂರಿನ ನನ್ನ ಕಚೇರಿಗೆ ಶ್ರೀಗಳ ಕಾರು ಚಾಲಕ ಹಣ ಕೊಟ್ಟು ಹೋಗಿದ್ದರು. ಹಣ ವಾಪಸ್ ಪಡೆಯಲು ಯಾರೂ ಬಾರದಿದ್ದರಿಂದ ಮಠಕ್ಕೆ ನೀಡಿದ್ದೇನೆ. ನಾನು ಖುದ್ದು ಹಾಲಸ್ವಾಮಿ ಮಠಕ್ಕೆ ಆಗಮಿಸಿ 56 ಲಕ್ಷ ರೂ. ಕೊಟ್ಟಿದ್ದೇನೆ ಎಂದು ವಿಡಿಯೋ ಹೇಳಿಕೆಯಲ್ಲಿ ವಕೀಲ ಪ್ರಣವ್ ಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ.
ಸಿಸಿಬಿ ಡಿಸಿಪಿ ಅಬ್ದುಲ್ ಅಹದ್‌ಗೆ ಪತ್ರ ಬರೆದಿರುವ ಪ್ರಣವ್ ಪ್ರಸಾದ್
ಮೈಸೂರು ಮೂಲದ ವಕೀಲ ಹಾಗೂ ಉದ್ಯಮಿ ಪ್ರಣವ್ ಪ್ರಸಾದ್ ಮಠಕ್ಕೆ ಹಣ ತಲುಪಿಸಿದ್ದ ಬಗ್ಗೆ ಸಿಸಿಬಿ ಡಿಸಿಪಿ ಅಬ್ದುಲ್ ಅಹದ್‌ಗೆ ಪ್ರಣವ್ ಪ್ರಸಾದ್ ಪತ್ರ ಬರೆದಿದ್ದಾರೆ. ಕಳೆದ ಎಂಟು ತಿಂಗಳಿಂದ ಶ್ರೀಗಳಿಗೆ ಪ್ರಣವ್ ಪ್ರಸಾದ್ ಪರಿಚಯವಿದ್ದು, ಆಗಾಗ ಮನೆಗೆ ಆಶೀರ್ವಚನ ನೀಡಲು ಹೋಗುತ್ತಿದ್ದರು.
4 ದಿನಗಳ ಹಿಂದೆ ಪ್ರಣವ್ ಪ್ರಸಾದ್‌ಗೆ ತನ್ನ ಕಾರು ಚಾಲಕ ರಾಜು ಮೂಲಕ ಹಾಲಶ್ರೀ ಹಣ ತಲುಪಿಸಿದ್ದಾರೆ. ಬ್ಯಾಗ್ ಅನ್ನು ಮೈಸೂರಿನಲ್ಲಿ ವಕೀಲರಿಗೆ ತಲುಪಿಸಲು ಹೋಗಿದ್ದರು. ಆದರೆ ವಕೀಲರು ಸಿಗದ ಕಾರಣ ನನ್ನ ಕಚೇರಿಯಲ್ಲಿ ಬಿಟ್ಟುಹೋಗಿದ್ದರು. ಬ್ಯಾಗ್‌ನಲ್ಲಿದ್ದ 60 ಲಕ್ಷ ರೂ. ಪೈಕಿ 4 ಲಕ್ಷ ರೂ. ಚಾಲಕ ರಾಜು ತೆಗೆದುಕೊಂಡು ಹೋಗಿದ್ದ. ಉಳಿದ ಹಣ ಶ್ರೀಗಳಿಗೆ ತಲುಪಿಸುವಂತೆ ಹೇಳಿದ್ದರು.
ಸದ್ಯ ಬ್ಯಾಗ್‌ನಲ್ಲಿದ್ದ ಹಣವನ್ನು ಬೆಳಗ್ಗೆ ಮಠಕ್ಕೆ ತಲುಪಿಸಿರುವ ಪ್ರಣವ್ ಪ್ರಸಾದ್, ನನಗೂ, ವಂಚನೆ ಕೇಸ್‌ಗೂ ಯಾವುದೇ ಸಂಬಂಧವಿಲ್ಲ. ತನಿಖೆಗೆ ಅನಕೂಲವಾಗುತ್ತೆ ಎಂದು ಮಾಹಿತಿ ನೀಡುತ್ತಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.