ಬೆಥನಿ ಎಜುಕೇಶನಲ್ ಸೊಸೈಟಿ: ಪ್ಲಾಟಿನಂ ಮಹೋತ್ಸವದ ಸಮಾರೋಪ

ಶೇರ್ ಮಾಡಿ

ಮಂಗಳೂರು: ಬೆಥನಿ ಎಜುಕೇಶನಲ್ ಸೊಸೈಟಿ ಮಂಗಳೂರು ಇದರ ಪ್ಲಾಟಿನಂ ಮಹೋತ್ಸವದ ಸಮಾರೋಪ ಸಮಾರಂಭವನ್ನು ಅತ್ಯಂತ ಸಂಭ್ರಮ ಮತ್ತು ವಿಜೃಂಭಣೆಯಿಂದ ಆಚರಿಸಲಾಯಿತು.

ಮಂಗಳೂರಿನ ಬೆಂದೂರು ಸಬಾಸ್ಟಿಯನ್ ಚರ್ಚಿನಲ್ಲಿ ನಡೆದ ಬಲಿಪೂಜೆಯ ನೇತೃತ್ವವನ್ನು ಬೆಂಗಳೂರಿನ ಆರ್ಚ್‌ ಬಿಷಪ್ ಡಾ.ಪೀಟರ್ ಮಚಾದೊ ವಹಿಸಿದ್ದರು. ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ.ಪೀಟರ್ ಪೌಲ್ ಸಲ್ಡಾನ್ಹಾ, ಉಡುಪಿಯ ಬಿಷಪ್ ಅತಿ ವಂ. ಡಾ ಜೆರಾಲ್ಡ್ ಐಸಾಕ್ ಲೋಬೋ, ಬರೇಲಿಯ ಬಿಷಪ್ ಅತಿ ವಂ. ಡಾ.ಇಗ್ನೇಷಿಯಸ್ ಡಿಸೋಜ ಮತ್ತು ಶಿಮ್ಲಾ-ಚಂಡೀಗಢದ ಬಿಷಪ್ ಅತಿ ವಂ. ಡಾ ಇಗ್ನೇಷಿಯಸ್ ಮಸ್ಕರೇನ್ಹಸ್ ಉಪಸ್ಥಿತರಿದ್ದರು.

ಧರ್ಮಪ್ರಾಂತ್ಯದ ಹಲವು ಧರ್ಮಗುರುಗಳು, ಹಳೆವಿದ್ಯಾರ್ಥಿಗಳು,ಪಾಲಕರು, ಸಿಬ್ಬಂದಿ ವರ್ಗ, ಬೆಥನಿ ಎಜುಕೇಶನಲ್ ಸೊಸೈಟಿಯ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳು ಭಾಗವಹಿಸಿದ್ದರು.
ರೇಮಂಡ್ ಫ್ರಾನ್ಸಿಸ್ ಕ್ಯಾಮಿಲಸ್ ಮಸ್ಕರೇನ್ಹಸ್ ಅವರ ಸಮಾಧಿಗೆ ಬಿಷಪರು, ಬೆಥನಿ ಸಂಸ್ಥೆಯ ಸುಪೀರಿಯರ್ ಜನರಲ್ ಸಿಸ್ಟರ್ ರೋಸ್ ಸೆಲಿನ್ ಪುಷ್ಪ್ಪ ನಮನ ಸಲ್ಲಿಸಿದರು. ನಂತರ ಸಂಜೆ ಬೆಂದೂರಿನ ಸೇಂಟ್ ಸಬಾಸ್ಟಿಯನ್ ಹಾಲ್‌ನಲ್ಲಿ ಔಪಚಾರಿಕ ವೇದಿಕೆ ಕಾರ್ಯಕ್ರಮ ಜರಗಿತು.

ಬೆಥನಿ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷೆ ರೋಸ್ ಸೆಲಿನ್ ಬಿ.ಎಸ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದ ಮುಖ್ಯ ಅತಿಥಿ ಬೆಂಗಳೂರಿನ ಆರ್ಚ್ ಬಿಷಪ್ ಅತಿ ವಂ.ಡಾ.ಪೀಟರ್ ಮಚಾದೊ ಅವರು ಪ್ಲಾಟಿನಂ ಜುಬಿಲಿ ಶಿಕ್ಷಣ ಯೋಜನೆಯನ್ನು ಉದ್ಘಾಟಿಸಿದರು. ಪ್ಲಾಟಿನಂ ಜುಬಿಲಿ ಸ್ಮರಣಿಕೆಯನ್ನು ಕರ್ನಾಟಕ ವಿಧಾನಸಭಾಧ್ಯಕ್ಷ ಯು ಟಿ ಖಾದರ್ ಅವರು ಬಿಡುಗಡೆ ಮಾಡಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರ ಮತ್ತು ಸಮಾಜದ ಏಕತೆ, ಭ್ರಾತೃತ್ವ ಮತ್ತು ಸಮಗ್ರ ಬೆಳವಣಿಗೆಗೆ ಕ್ರೈಸ್ತ ಸಮುದಾಯ ಸಾಕಷ್ಟು ಕೊಡುಗೆ ನೀಡಿದೆ. ಕ್ಯಾಥೋಲಿಕ್ ಶಿಕ್ಷಣ ಸಂಸ್ಥೆಗಳಲ್ಲಿ ಪಡೆದ ಶಿಕ್ಷಣ ಮತ್ತು ಉದಾತ್ತ ಮೌಲ್ಯಗಳು ಶಕ್ತಿಯ ಮೂಲವಾಗಿ ಮಾರ್ಪಟ್ಟಿವೆ ಮತ್ತು ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಿವೆ ಎಂದರು.

ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಶುಭ ಹಾರೈಸಿದರು.

ಅತಿಥಿಗಳಾಗಿ ಬೆಂದೂರು ಚರ್ಚಿನ ಧರ್ಮಗುರು ರೆ.ಫಾ.ವಿನ್ಸೆಂಟ್ ಮೊಂತೇರೊ, ಬಿಇಎಸ್‌ನ ಕಾರ್ಯದರ್ಶಿ ಸಂಧ್ಯಾ ಬಿಎಸ್ ಸ್ವಾಗತಿಸಿದರು. ಕೌನ್ಸಿಲ್ ಆಫ್ ಮ್ಯಾನೇಜ್ಮೆಂಟ್ ಸದಸ್ಯೆ ಸಿಸ್ಟರ್ ಫಿಲೋಮಿನಾ ಸಲ್ಡಾನ್ಹಾ ಬಿಎಸ್ ವಂದಿಸಿದರು. ಬೆಂದೂರು ಸಂತ ಥೆರೆಸಾ ಶಾಲೆಯ ಜಾಸ್ಮಿನ್ ಮೊರೆರಾ ಮತ್ತು ಕಂಕನಾಡಿ ಸಂತ ಜೋಸೆಫ್ ಶಾಲೆಯ ರೀನಾ ಸಲ್ಡಾನ್ಹಾ ಕಾರ್ಯಕ್ರಮ ನಿರೂಪಿಸಿದರು.

Leave a Reply

error: Content is protected !!