ತಾಲೂಕು ದಸರಾ ಕ್ರೀಡಾಕೂಟವು ಗುರುವಾರ ಉಜಿರೆಯ ಎಸ್ ಡಿಎಂ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಗುರುವಾರ ಜರಗಿತು.
ಕ್ರೀಡಾಕೂಟವನ್ನು ಎಸ್ ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಉದ್ಘಾಟಿಸಿ ಮಾತನಾಡಿ “ಇತ್ತೀಚಿನ ವರ್ಷಗಳಲ್ಲಿ ಒಲಂಪಿಕ್ಸ್ ಸೇರಿದಂತೆ ವಿಶ್ವದ ಕ್ರೀಡಾಕೂಟಗಳಲ್ಲಿ ಭಾರತವು ಮುಂಚೂಣಿಯಲ್ಲಿರುವುದು ಹೆಮ್ಮೆಯ ವಿಚಾರ. ಭಾರತವು ಸಾಮಾಜಿಕವಾಗಿ ಆರ್ಥಿಕ ವಾಗಿ ಪ್ರಬಲ ರಾಷ್ಟ್ರ ಎಂದು ಗುರುತಿಸಲ್ಪಟ್ಟಿದ್ದು ಕ್ರೀಡೆಯಲ್ಲೂ ಬಲಿಷ್ಠ ರಾಷ್ಟ್ರವಾಗಿ ಮೂಡಿ ಬರುತ್ತಿದೆ. ಇದಕ್ಕೆ ಯುವಜನತೆ ಇನ್ನಷ್ಟು ಹೆಚ್ಚಿನ ಶಕ್ತಿ ತುಂಬಬೇಕು. ಕ್ರೀಡೆ ಎಂಬುದು ಜೀವನದ ಅವಿಭಾಜ್ಯ ಅಂಗವಾಗಿದ್ದು ಇದರಲ್ಲಿ ತೊಡಗಿಸಿಕೊಂಡಾಗ ಮಾನಸಿಕ, ಶಾರೀರಿಕ, ಭಾವನಾತ್ಮಕ ದೃಢತೆ ಸಾಧ್ಯ ಎಂದರು.
ಉಜಿರೆ ಗ್ರಾಪಂ ಅಧ್ಯಕ್ಷೆ ಉಷಾ ಕಿರಣ ಕಾರಂತ್ ಅಧ್ಯಕ್ಷತೆ ವಹಿಸಿ ಮಾತನಾಡಿ “ಇಂದಿನ ದಿನಗಳಲ್ಲಿ ಕ್ರೀಡಾ ಕ್ಷೇತ್ರಕ್ಕೂ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿರುವುದು ಶ್ಲಾಘನೀಯ ಯುವಜನರ ಸಾಧನೆ, ಪ್ರತಿಭಾ ಪ್ರೋತ್ಸಾಹಕ್ಕೆ ಕ್ರೀಡಾಕೂಟಗಳು ಸಹಕಾರಿಯಾಗುತ್ತವೆ. ಅವಕಾಶಗಳನ್ನು ಬಳಸಿಕೊಂಡು ಮುನ್ನಡೆದರೆ ಯಶಸ್ಸು ಸಾಧ್ಯ” ಎಂದರು.
ತಾಲೂಕು ದೈಹಿಕ ಶಿಕ್ಷಣ ಪರಿವಿಕ್ಷಣಾಧಿಕಾರಿ ಸುಜಯಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಕುಸುಮಾಧರ ಬಿ., ಎಸ್.ಡಿ.ಎಂನ ಕ್ರೀಡಾ ಕಾರ್ಯದರ್ಶಿ ರಮೇಶ್, ರವಿ ವೈ.ನಾಯಕ್, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣಾನಂದ ರಾವ್, ತಾಲೂಕು ಯುವಜನ ಒಕ್ಕೂಟದ ನಿರ್ದೇಶಕ ಚಿದಾನಂದ ಇಡ್ಯಾ, ತಾಲೂಕು ನೌಕರರ ಸಂಘದ ಅಧ್ಯಕ್ಷ ಜಯರಾಜ್ ಜೈನ್ ಉಪಸ್ಥಿತರಿದ್ದರು.
ಯಂಗ್ ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ ಸಂಚಾಲಕ ನಾಮದೇವ್ ರಾವ್ ನಿರೂಪಿಸಿದರು. ಸಾಂತಪ್ಪ ಸ್ವಾಗತಿಸಿದರು. ಶೀನಪ್ಪ ಗೌಡ ವಂದಿಸಿದರು.
ದ.ಕ ಜಿಲ್ಲಾಡಳಿತ, ದ ಕ ಜಿ ಪಂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಪಂ ಬೆಳ್ತಂಗಡಿ, ಗ್ರಾಪಂ ಉಜಿರೆ, ಶಾಲಾ ಶಿಕ್ಷಣ ಇಲಾಖೆ, ಎಸ್ ಡಿಎಂ ಸ್ವಾಯತ್ತ ಕಾಲೇಜು, ಯುವಜನ ಒಕ್ಕೂಟ, ಯಂಗ್ ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದವು.