ಆಲದ ಮರ ಬಿದ್ದು ಕಾರ್ಮಿಕ ಸಾವು, ಇಬ್ಬರಿಗೆ ಗಾಯ

ಶೇರ್ ಮಾಡಿ

ನಾಗಬನ ಮತ್ತು ಮನೆ ಮೇಲೆ ಅಪಾಯಕಾರಿಯಾಗಿ ವಾಲಿದ್ದ ಮರವನ್ನು ಕಡಿಯುತ್ತಿದ್ದ ವೇಳೆ ಮರ ಉರುಳಿ ಬಿದ್ದು ಜಾರ್ಖಂಡ್ ಮೂಲದ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಮಜೂರು ಗ್ರಾಮದ ಕರಂದಾಡಿಯಲ್ಲಿ ಆ.2ರ ಸೋಮವಾರ ಮಧ್ಯಾಹ್ನ ನಡೆದಿದೆ.

ಜಾರ್ಖಂಡ್ ಮೂಲದ ಸುಧೀರ್ ಪಾಂಜೆ ಮೃತ ಕೂಲಿ ಕಾರ್ಮಿಕನಾಗಿದ್ದು, ಗಾಯಾಳುಗಳ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಕರಂದಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬಳಿಯ ಖಾಸಗಿಯವರಿಗೆ ಸೇರಿದ ನಾಗಬನವೊಂದರ ಮೇಲೆ ವಾಲಿದ್ದ ಬೃಹತ್ ಗೋಳಿಮರವನ್ನು ಕಡಿಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಬೃಹತ್ ಗೋಳಿ ಮರವನ್ನು ಕಡಿಯುತ್ತಿದ್ದ ವೇಳೆ ಅದು ಕಾರ್ಮಿಕರ ಮೇಲೆ ಉರುಳಿ ಬಿದ್ದಿತ್ತು. ಇದರಿಂದಾಗಿ ಮೂವರು ಕಾರ್ಮಿಕರು ಮರದಡಿಗೆ ಸಿಲುಕಿಕೊಂಡಿದ್ದು, ಓರ್ವ ಮರದಡಿ ಸಿಲುಕಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಇಬ್ಬರನ್ನು ರಕ್ಷಿಸಿ, ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮರದಡಿ ಸಿಲುಕಿರುವ ಕಾರ್ಮಿಕನನ್ನು ತೆರವುಗೊಳಿಸುವ ಕಾರ್ಯ ಬರದಿಂದ ಸಾಗುತ್ತಿದೆ. ಕಾಪು ಪೊಲೀಸರು ಈಗಾಗಲೇ ಸ್ಥಳಕ್ಕೆ ಧಾವಿಸಿದ್ದು ಸ್ಥಳೀಯರ ನೇತೃತ್ವದಲ್ಲಿ ಮರ ತೆರವು ಕಾರ್ಯ ಬರದಿಂದ ಸಾಗುತ್ತಿದೆ.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕಾಪು ಎಸ್.ಐ. ಅಬ್ದುಲ್ ಖಾದರ್, ಕ್ರೈಂ ಎಸ್.ಐ. ಪುರುಷೋತ್ತಮ್ ಹಾಗೂ ಪೊಲೀಸ್ ಸಿಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳೀಯರು ಮರ ತೆರವು ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಕರಿಸಿದರು.

Leave a Reply

error: Content is protected !!