ವ್ಹೀಲ್ ಚೇರ್ ನಲ್ಲಿ ಕುಳಿತು ಇಸ್ರೇಲ್ ಮೇಲೆ ಪ್ರತೀಕಾರ ತೀರಿಸುತ್ತಿರುವ ಹೊಸ ಬಿನ್ ಲಾಡೆನ್ ಯಾರು?

ಶೇರ್ ಮಾಡಿ

ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಇದುವರೆಗೆ ಕನಿಷ್ಠ 900 ಇಸ್ರೇಲಿಗಳು ಅಸುನೀಗಿದ್ದು, 2,616 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಮತ್ತೊಂದೆಡೆ, ಉಗ್ರಗಾಮಿ ಪಡೆ ಹಮಾಸ್, ಇಸ್ರೇಲಿ ಸೇನಾ ಅಧಿಕಾರಿಗಳು ಸೇರಿದಂತೆ 100 ರಿಂದ 150 ಜನರನ್ನು ಒತ್ತೆಯಾಳಾಗಿ ತೆಗೆದುಕೊಂಡಿದೆ. ಇಸ್ರೇಲ್‌ ನ ಪ್ರತಿದಾಳಿಯಿಂದಾಗಿ ಗಾಜಾದಲ್ಲಿ ಹಮಾಸ್ ಉಗ್ರರು ಸೇರಿದಂತೆ 700 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಅತ್ಯುನ್ನತ ರಕ್ಷಣಾ ಪಡೆ ಹೊಂದಿರುವ ಇಸ್ರೇಲ್ ಮೇಲೆ ಈ ಅತಿ ದೊಡ್ಡ ಭಯೋತ್ಪಾದಕ ದಾಳಿ ನಡೆಸುವ ಹಿಂದೆ ಮಾಸ್ಟರ್ ಮೈಂಡ್ ಆಗಿ ಮೊಹಮ್ಮದ್ ಡೀಫ್ ಕೆಲಸ ಮಾಡಿದ್ದಾನೆಂದು ಇಸ್ರೇಲ್ ನಂಬಿದೆ. ಇಸ್ರೇಲ್ ಮೊಹಮ್ಮದ್ ಡೀಫ್ ನನ್ನು ಹೊಸ ಒಸಾಮಾ ಬಿನ್ ಲಾಡೆನ್ ಎಂದು ಕರೆದಿದೆ.

ವ್ಹೀಲ್ ಚೇರ್ ನಲ್ಲಿ ಮಾಸ್ಟರ್ ಮೈಂಡ್:
ಹಮಾಸ್ ದಾಳಿಯನ್ನು ಮೊಹಮ್ಮದ್ ಡೀಫ್ ಅವರ ಆಜ್ಞೆಯ ಮೇರೆಗೆ ನಡೆಸಲಾಗಿದೆ ಎಂದು ಇಸ್ರೇಲ್ ಹೇಳುತ್ತಿದೆ. ಇಸ್ರೇಲ್‌ ನ ಗುಪ್ತಚರ ಸಂಸ್ಥೆ ಮೊಸ್ಸಾದ್ 58 ವರ್ಷದ ಮೊಹಮ್ಮದ್ ಡೀಫ್‌ ನನ್ನು ಕೊಲ್ಲಲು ಏಳು ಬಾರಿ ಪ್ರಯತ್ನಿಸಿದರೂ ಪ್ರತಿ ಬಾರಿ ವಿಫಲವಾಗಿದೆ ಎಂದು ಹೇಳಲಾಗುತ್ತದೆ. ಮೊಸ್ಸಾದ್ ಹಲವು ದಶಕಗಳಿಂದ ಮೊಹಮ್ಮದ್ ಡೀಫ್‌ ಗಾಗಿ ಹುಡುಕಾಟ ನಡೆಸುತ್ತಿದೆ ಆದರೆ ಪ್ರತಿ ಬಾರಿ ಈ ಚಾಲಾಕಿ ಮೊಸಾದ್‌ ನ ಜಾಲದಿಂದ ತಪ್ಪಿಸಿಕೊಳ್ಳುತ್ತಾನೆ.

ವರದಿಗಳ ಪ್ರಕಾರ, ಮೊಹಮ್ಮದ್ ಡೀಫ್ ಯಾವಾಗಲೂ ಗಾಲಿಕುರ್ಚಿಯಲ್ಲಿಯೇ (ವ್ಹೀಲ್ ಚೇರ್) ಇರುತ್ತಾನೆ. ಗಾಜಾದಲ್ಲಿ ನಿರ್ಮಿಸಲಾದ ಭೂಗತ ಸುರಂಗಗಳ ಜಾಲದಲ್ಲಿ ವಾಸಿಸುತ್ತಾನೆ. ಈ ಸುರಂಗಗಳ ಕಾರಣದಿಂದಾಗಿ, ಮೊಹಮ್ಮದ್ ಡೀಫ್ ಪ್ರತಿ ಬಾರಿ ಮೊಸ್ಸಾದ್ ಕೈಯಿಂದ ತಪ್ಪಿಸಿಕೊಳ್ಳುತ್ತಿದ್ದಾನೆ.

ಈ ಭೂಗತ ಸುರಂಗಗಳ ನಿರ್ಮಾಣದಲ್ಲಿಯೂ ಮೊಹಮ್ಮದ್ ಡೀಫ್ ಪ್ರಮುಖ ಪಾತ್ರ ವಹಿಸಿದ್ದಾನೆ. ಒಂದೇ ಸ್ಥಳದಲ್ಲಿ ಎಂದೂ ನೆಲೆಸದ ಡೀಫ್, ಪ್ರತಿ ರಾತ್ರಿಯೂ ಈತ ತನ್ನ ನೆಲೆಯನ್ನು ಬದಲಾಯಿಸುತ್ತಾನೆ. ನಿರಾಶ್ರಿತ ಶಿಬಿರದಲ್ಲಿ ಜನಿಸಿದ ಮೊಹಮ್ಮದ್ ಡೀಫ್ ನ ಕೇವಲ ಒಂದು ಫೋಟೊ ಇಸ್ರೇಲ್ ಬಳಿಯಿದೆ. ಅವನು ತನ್ನ ಹೆಸರನ್ನು ಅರೇಬಿಕ್‌ ನಲ್ಲಿ ಅತಿಥಿ ಎಂದರ್ಥ ಬರುವ ಡೀಫ್ ಎಂದು ಬದಲಾಯಿಸಿದ್ದ ಎನ್ನುತ್ತದೆ ವರದಿ.

ಮೊಹಮ್ಮದ್ ಡೀಫ್ 1965 ರಲ್ಲಿ ಗಾಜಾದಲ್ಲಿ ಜನಿಸಿದ. ಅವನ ತಂದೆಯ ಹೆಸರು ಮೊಹಮ್ಮದ್ ದಿಯಾಬ್ ಇಬ್ರಾಹಿಂ ಅಲ್ ಮಸ್ರಿ. ಮೊಹಮ್ಮದ್ ಡೀಫ್ ಹಮಾಸ್‌ ನ ಮಿಲಿಟರಿ ವಿಭಾಗವಾದ ಅಲ್ ಕಸ್ಸಾಮ್ ಬ್ರಿಗೇಡ್‌ ನ ಕಮಾಂಡರ್. ಇಸ್ರೇಲಿ ಜನರನ್ನು ಕೊಲ್ಲುವಂತೆ ಹಮಾಸ್ ಹೋರಾಟಗಾರರಿಗೆ ಅವನು ಆಗಾಗ್ಗೆ ತನ್ನ ರೆಕಾರ್ಡ್ ಮಾಡಿದ ಸಂದೇಶಗಳನ್ನು ಕಳುಹಿಸುತ್ತಾನೆ. ಹಮಾಸ್‌ ಗೆ ಸೇರುವಂತೆ ಮೊಹಮ್ಮದ್ ಡೀಫ್ ವಿಶ್ವದ ಇತರ ದೇಶಗಳಲ್ಲಿರುವ ತಮ್ಮ ಅಭಿಮಾನಿಗಳಿಗೆ ಮನವಿ ಮಾಡುತ್ತಾನೆ.

Leave a Reply

error: Content is protected !!