ಹಿರಿಯೂರು ಕ್ಷೇತ್ರದ ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ. ಇದೇ ತಿಂಗಳ ಅ.20 ರಂದು ಸೇರ್ಪಡೆಯಾಗುವ ಸಾಧ್ಯತೆಗಳಿದ್ದು, ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದಾರೆ.
ಚಿತ್ರದುರ್ಗದ ಕೃಷ್ಣ ಯಾದವಾನಂದ ಮಠಕ್ಕೆ ಭೇಟಿ ನೀಡಿದ್ದ ಮಾಜಿ ಶಾಸಕಿ ಸಮಾಜದ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ. ಕೃಷ್ಣ ಯಾದವಾನಂದ ಶ್ರೀ ಸಮ್ಮುಖದಲ್ಲಿ ಸಮಾಜದ ಮುಖಂಡರೊಂದಿಗೆ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಬಿಜೆಪಿ ಪಕ್ಷ ತೊರೆಯಲು ಕಾರಣ ತಿಳಿಸಿದ್ದಾರೆ.
ಅಕ್ಟೋಬರ್ 20ಕ್ಕೆ ಕಾಂಗ್ರೆಸ್ ಸೇರ್ಪಡೆ ಬಹುತೇಕ ನಿರ್ಧಾರವಾಗಿದೆ. ನಮ್ಮ ಸಮಾಜದ ಮುಖಂಡರ ಆಲೋಚನೆಯಂತೆ ಪಕ್ಷ ಬದಲಾವಣೆಗೆ ನಿರ್ಧಾರ ಮಾಡಿದ್ದೇನೆ. ಪತಿ ಡಿ.ಟಿ ಶ್ರೀನಿವಾಸ್‌ಗೆ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಟಿಕೆಟ್ ನೀಡಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಕೆಪಿಸಿಸಿ ಅಧ್ಯಕ್ಷರು ಈಗಾಗಲೇ ಪಕ್ಷದ ಟಿಕೆಟ್ ನೀಡಲು ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಸೇರಲು ನಾನು ಯಾವುದೇ ಬೇಡಿಕೆಯಿಟ್ಟಿಲ್ಲ. ಬಿಜೆಪಿಯಲ್ಲಿ ನನ್ನನ್ನು ಕಡೆಗಣಿಸಲಾಯಿತು ಎಂದು ಹೇಳುವುದಿಲ್ಲ. ನನ್ನ ಕ್ಷೇತ್ರಕ್ಕೆ ಮಾಜಿ ಸಿಎಂಗಳಾದ ಬಿ.ಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಹೆಚ್ಚಿನ ಅನುದಾನ ನೀಡಿದ್ದಾರೆ. ಆದ್ರೆ ನಮ್ಮ ಯಾದವ ಸಮಾಜದ ಕಡೆಗಣನೆಯಾಗಿದೆ. ಅನೇಕ ಯಾದವ ಸಮುದಾಯ ಭವನ, ಹಾಸ್ಟೆಲ್ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಈ ಹಿಂದೆ ಪ್ರಮಾಣ ವಚನ ಸ್ವೀಕರಿಸಬೇಕು ಎನ್ನುವ ಕೊನೇ ಕ್ಷಣದಲ್ಲಿ ನನಗೆ ಸಚಿವ ಸ್ಥಾನ ಕೈತಪ್ಪಿಸಲಾಗಿತ್ತು. ಆಗಲೂ ನಾನು ಪಕ್ಷದ ವಿರುದ್ಧ ಮಾತನಾಡಿರಲಿಲ್ಲ. ಇದೀಗ ಸಮಾಜದ ಮುಖಂಡರ ನಿರ್ಧಾರದಂತೆ ಪಕ್ಷ ಬದಲಾವಣೆ ಮಾಡುತ್ತಿದ್ದೇನೆ ಎಂದು ವಿವರಿಸಿದ್ದಾರೆ.