ಅರಣ್ಯ ಭೂಮಿ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ವಿವಾದಕ್ಕೆ ಕಾರಣವಾಗಿದ್ದ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಸರ್ವೇ ನಂಬರ್ 309ರ ಅಂದರೆ ನಿಡ್ಲೆ ವಿಸ್ತೃತ ಬ್ಲಾಕ್ 2ರ ಮತ್ತು ಕಳೆಂಜ ವಿಸ್ತೃತ ಬ್ಲಾಕ್ ನ ಜಂಟಿ ಸರ್ವೆ ಕಾರ್ಯವು ಅ.11 (ಇಂದಿನಿಂದ) ಆರಂಭಗೊಳ್ಳಲಿದೆ. ತಾಲೂಕು ತಹಶೀಲ್ದಾರ್, ಉಪ್ಪಿನಂಗಡಿ ವಲಯ ಅಧಿಕಾರಿ, ಕಂದಾಯ ಅಧಿಕಾರಿಗಳು, ಸರ್ವೆ ಅಧಿಕಾರಿಗಳ ಸಹಭಾಗಿತ್ವದಲ್ಲಿ ಎಡಿಎಲ್ಆರ್ ಸರ್ವೆ ಮೂಲಕ ಸುಮಾರು 8,446 ಎಕರೆಯಷ್ಟು ಪ್ರದೇಶವನ್ನು ಸರ್ವೆ ಮಾಡಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆಂಜ ಗ್ರಾಮದ ಅಮ್ಮಿನಡ್ಕ ಕುದ್ದ ಲೋಲಕ್ಷ ಯಾನೆ ಅನಂತುರವರ ಹೊಸ ನಿರ್ಮಾಣದ ಮನೆಯ ಫೌಂಡೇಶನ್ ಅನ್ನು ಅರಣ್ಯ ಇಲಾಖೆಯ ಹೊಸ ಒತ್ತುವರಿ ಎಂದು ಅ.6ರಂದು ಅರಣ್ಯ ಅಧಿಕಾರಿಗಳು ತೆರವುಗೊಳಿಸಿದ್ದರು.
ಈ ಸಂಬಂಧ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅದು.7ರಂದು ಸ್ಥಳಕ್ಕೆ ಆಗಮಿಸಿ ಜಂಟಿ ಸರ್ವೆ ನಡೆಸಿ, ಸರ್ವೆಯಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗವೆಂದಾದರೆ ತೆರವುಗೊಳಿಸಿ, ಜಂಟಿ ಸರ್ವೆ ಆಗದೆ ಹೋದಲ್ಲಿ ತೆರವುಗೊಳಿಸಲು ಬಿಡುವುದಿಲ್ಲ ಎಂದು ತಮ್ಮ ಮುಂದಾಳತ್ವದಲ್ಲಿಯೇ ನೂತನ ಮನೆಯ ನಿರ್ಮಾಣದ ಜಾಗದಲ್ಲಿಯೇ ಶೆಡ್ ಅನ್ನು ನಿರ್ಮಿಸಿದ್ದರು.
ಜಾಗವನ್ನು ಒತ್ತುವರಿ ನಡೆಸಿದವರು ಹಾಗೂ ಇದಕ್ಕೆ ಸಹಕರಿಸಿದ 11 ಜನರ ವಿರುದ್ಧ ಉಪ್ಪಿನಂಗಡಿ ವಲಯ ಅರಣ್ಯ ಅಧಿಕಾರಿಗಳು ಧರ್ಮಸ್ಥಳ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು.
ಅಕ್ಟೋಬರ್ 9ರಂದು ಮತ್ತೆ ಅರಣ್ಯ ಅಧಿಕಾರಿಗಳು ಮೇಲಧಿಕಾರಿಗಳ ಆದೇಶದಂತೆ ಈ ಶೆಡ್ ನ ತೆರವು ಕಾರ್ಯಕ್ಕೆ ಮುಂದಾಗಿದ್ದರು. ಈ ಸಂದರ್ಭ ಜಿಲ್ಲೆಯ ಹಲವು ಶಾಸಕರು ಮತ್ತು ಎಂಎಲ್ಸಿ, ಹಿಂದೂ ಮುಖಂಡರು ಸ್ಥಳೀಯ ಜನಪ್ರತಿನಿಧಿಗಳು ಶೆಡ್ ತೆರವುಗೊಳಿಸದಂತೆ ಬೆಳ್ತಂಗಡಿ ಶಾಸಕರ ಜತೆಯಾಗಿದ್ದರು. ಅರಣ್ಯ ಅಧಿಕಾರಿಗಳು ಶೆಡ್ ತೆರವು ಗೊಳಿಸುವ ಸಂದರ್ಭ ಶಾಸಕರು ಅವಾಚ್ಯ ಶಬ್ದಗಳಿಂದ ಅರಣ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು ಅಲ್ಲದೆ ಅರಣ್ಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಡುವೆ ಹಲವು ಗಂಟೆಗಳ ಕಾಲ ವಾಗ್ವಾದ ನಡೆದಿತ್ತು.
ಈ ಸಂದರ್ಭ ಶಾಸಕರುಗಳು ಜಂಟಿಸರ್ವೆಗೆ ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದು, ಒಂದು ವೇಳೆ ಅರಣ್ಯ ಇಲಾಖೆಗೆ ಸೇರಿದ ಜಾಗ ಇದಾದರೆ, ತಾವೇ ಖುದ್ದಾಗಿ ಈ ಮನೆಯನ್ನು ತೆರೆವುಗೊಳಿಸುವುದಾಗಿ ಡಿ ಎಫ್ ಓ ರವರಿಗೆ ಲಿಖಿತ ರೂಪದಲ್ಲಿ ಬರೆದುಕೊಟ್ಟಿದ್ದಾರೆ.