ನಾಯಕ ರೋಹಿತ್ ಶರ್ಮಾ ಸ್ಫೋಟಕ ಶತಕ, ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದ ಭಾರತ ವಿಶ್ವಕಪ್ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನದ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ 8 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿತು. 273 ರನ್‌ಗಳ ಸವಾಲನ್ನು ಪಡೆದ ಭಾರತ 35 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 273 ರನ್ ಹೊಡೆಯುವ ಮೂಲಕ ಗುರಿಯನ್ನು ತಲುಪಿತು.
ಭಾರತದ ಪರ ರೋಹಿತ್ ಶರ್ಮಾ ಆರಂಭದಿಂದಲೇ ಸಿಡಿಯಲು ಆರಂಭಿಸಿದ್ದರು. ರೋಹಿತ್ ಬ್ಯಾಟ್ ಬೀಸಿದ ಪರಿಣಾಮ ಭಾರತ 11.5 ಓವರ್‌ಗಳಲ್ಲಿ 100 ರನ್‌ಗಳ ಗಡಿ ದಾಟಿತ್ತು. ಮೊದಲ ವಿಕೆಟಿಗೆ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಮತ್ತು 112 ಎಸೆತಗಳಲ್ಲಿ 156 ರನ್ ಜೊತೆಯಾಟವಾಡುವಾಗಲೇ ಭಾರತದ ಗೆಲುವು ಖಚಿತವಾಗಿತ್ತು.
ಇಶನ್ ಕಿಶನ್ 47 ರನ್ (47 ಎಸೆತ, 5 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರೆ ರೋಹಿತ್ ಶರ್ಮಾ 131 ರನ್ (84 ಎಸೆತ, 16 ಬೌಂಡರಿ, 5 ಸಿಕ್ಸರ್) ಹೊಡೆದು ಬೌಲ್ಡ್ ಆದರು. ಇದನ್ನೂ ಓದಿ: ಹಿಟ್‌ಮ್ಯಾನ್ ಸ್ಫೋಟಕ ಆಟಕ್ಕೆ 4 ದಾಖಲೆ ಸೃಷ್ಟಿ!
ರೋಹಿತ್ ಶರ್ಮಾ ಔಟಾದಾಗ ತಂಡದ ಮೊತ್ತ 205 ರನ್ ಆಗಿತ್ತು. ಮುರಿಯದ ಮೂರನೇ ವಿಕೆಟಿಗೆ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ 56 ಎಸೆತಗಳಲ್ಲಿ 68 ರನ್ ಜೊತೆಯಾಟವಾಡುವ ಮೂಲಕ ಗೆಲುವಿನ ದಡ ಸೇರಿಸಿದರು. ವಿರಾಟ್ ಕೊಹ್ಲಿ ಔಟಾಗದೇ 55 ರನ್ (56 ಎಸೆತ, 6 ಬೌಂಡರಿ), ಶ್ರೇಯಸ್ ಐಯ್ಯರ್ ಔಟಾಗದೇ 25 ರನ್ (23 ಎಸೆತ, 1 ಬೌಂಡರಿ, 1 ಸಿಕ್ಸರ್) ಹೊಡೆದರು.
ಅಫ್ಘಾನ್ ಪರವಾಗಿ ನಾಯಕ ಹಶ್ಮತುಲ್ಲಾ ಶಾಹಿದಿ 80 ರನ್ (88 ಎಸೆತ, 8 ಬೌಂಡರಿ, 1 ಸಿಕ್ಸರ್) ಅಜ್ಮತುಲ್ಲಾ ಒಮರ್ಜಾಯ್ 62 ರನ್(69 ಎಸೆತ, 2 ಬೌಂಡರಿ, 4 ಸಿಕ್ಸರ್) ಹೊಡೆದು ಔಟಾದರು. ಅಫ್ಘಾನಿಸ್ತಾನ 63 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು.
ಭಾರತದ ಪರ ಬುಮ್ರಾ 4 ವಿಕೆಟ್, ಹಾರ್ದಿಕ್ ಪಾಂಡ್ಯ 2, ಶಾರ್ದೂಲ್ ಠಾಕೂರ್ ಮತ್ತು ಕುಲದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು.
ಎರಡನೇ ಸ್ಥಾನ:
ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್, ಭಾರತ, ಪಾಕಿಸ್ತಾನ ಎರಡು ಪಂದ್ಯಗಳನ್ನು ಗೆದ್ದು 4 ಅಂಕ ಸಂಪಾದಿಸಿದೆ. ನ್ಯೂಜಿಲೆಂಡ್ ನೆಟ್ ರನ್ ರೇಟ್ 1.958 ಇರುವ ಕಾರಣ ಮೊದಲ ಸ್ಥಾನದಲ್ಲಿದ್ದರೆ ಭಾರತ 1.500 ನೆಟ್ ರನ್ ರೇಟ್‌ನೊಂದಿಗೆ ಎರಡನೇ ಸ್ಥಾನಕ್ಕೆ ಜಿಗಿದಿದೆ. ಪಾಕಿಸ್ತಾನ 0.927 ನೆಟ್ ರನ್ ರೇಟ್‌ನೊಂದಿಗೆ ಮೂರನೇ ಸ್ಥಾನಕ್ಕೆ ಜಾರಿದೆ.