ಗ್ರಾ.ಪಂ. ಕಚೇರಿಗೆ ಅಧ್ಯಕ್ಷೆ, ಉಪಾಧ್ಯಕ್ಷ, ಸದಸ್ಯರಿಂದಲೇ ದಿಗ್ಬಂಧನ

ಶೇರ್ ಮಾಡಿ

ಎ ಗ್ರೇಡ್ ಪಂಚಾಯತ್ ಗಳಲ್ಲಿ ಒಂದಾಗಿರುವ, ಈ ಹಿಂದೆಯೇ ಗಾಂಧಿ ಗ್ರಾಮ ಪುರಸ್ಕಾರ ಪಡೆದಿದ್ದ ಶಿರ್ತಾಡಿ ಗ್ರಾಮ ಪಂಚಾಯತ್ ಪಿಡಿಓ ವಿರುದ್ಧ ಸ್ವತ: ಗ್ರಾ.ಪಂ. ಅಧ್ಯಕ್ಷೆ, ಉಪಾಧ್ಯಕ್ಷ ಮತ್ತು ಕೆಲ ಸದಸ್ಯರೇ ಕಚೇರಿಗೆ ದಿಗ್ಬಂಧನ ಹೇರಿದ ಘಟನೆ ಆ.23ರ ಗುರುವಾರ ಬೆಳಗ್ಗೆ ನಡೆದಿದೆ.

ಪಿಡಿಓ ಮಂಜುಳಾ ಹುನಗುಂದ ಅವರು ಮೂರು ದಿನ ಗಳಿಂದ ಕಚೇರಿಯಲ್ಲಿ ಕಾಣಿಸುತ್ತಿಲ್ಲ. ಅಧ್ಯಕ್ಷೆ ಆಗ್ನೆಸ್ ಡಿಸೋಜರಿಗೂ ಮಾಹಿತಿ ಇಲ್ಲ, ಉಪಾಧ್ಯಕ್ಷ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಅವರಿಗೂ ತಿಳಿಸಿಲ್ಲ.

ಇಲ್ಲಿರುವ ಪಿಡಿಓ ನೆಲ್ಲಿಕಾರ್ ನಿಂದ ಪ್ರಭಾರ, ಆದರೆ ಪೂರ್ಣಾವಧಿಗಾಗಿ ಬಂದವರು. ಅವರು ತನಗೆ ಖುಷಿ ಬಂದ ಹಾಗೆ ರಜೆ ಹಾಕುತ್ತಾರೆ. ಅಧ್ಯಕ್ಷರಿಗೆ ತಿಳಿಸುವುದಿಲ್ಲ ಎಂಬ ಆರೋಪ ಇದೆ. ಇನ್ನೊಂದೆಡೆ ಮಾಡಬಹುದಾದ ಕೆಲಸವನ್ನೂ ಅವರು ಮಾಡುತ್ತಿಲ್ಲ. ಸುಮ್ಮನೇ ವಿಳಂಬಿಸುತ್ತಾರೆ ಎಂಬ ಆರೋಪವು ಇದೆ.

ಉದಾಹರಣೆಗೆ, 9/11 ಮನೆ ನಿವೇಶನದ 49ಕ್ಕೂ ಅಧಿಕ ಅರ್ಜಿಗಳು ವಾರಗಟ್ಟಲೆ ವಿಲೇವಾರಿಯಾಗದೆ ಬಾಕಿ ಆಗಿವೆ. ಅಂಗಡಿ ಲೈಸೆನ್ಸ್ ರಿನ್ಯೂವಲ್ ಕೂಡಾ ಆಗುತ್ತಿಲ್ಲ‌. ಪಿಡಿಓ ಸೈಟ್ ವಿಸಿಟ್ ಮಾಡುತ್ತಿಲ್ಲ. ಹಾಗಾಗಿ ಸುಮ್ಮನೇ ದಂಡ ಶುಲ್ಕ ಪಾವತಿಸಬೇಕಾಗಿದೆ.

ಈಗಾಗಲೇ ಮನೆ ಕಟ್ಟಿ ಕುಳಿತ ಎಷ್ಟೋ ಮಂದಿಯ ಮನೆಯ ವಿವರ ತಂತ್ರಾಂಶ 2 ರಲ್ಲಿ ದಾಖಲಾಗಿಲ್ಲ. ಹಾಗಾಗಿ ಅವರಿಂದ ತೆರಿಗೆ ಪಡೆದುಕೊಳ್ಳಲೂ ಆಗುತ್ತಿಲ್ಲ. ಬೇರೆ ಸರಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲೂ ಈ ಫಲಾನುಭವಿಗಳಿಂದ ಆಗುತ್ತಿಲ್ಲ. ಗ್ರಾಮಸ್ಥರು ತಮ್ಮ ಬೇಡಿಕೆ, ಸಮಸ್ಯೆ ಪರಿಹಾರಕ್ಕಾಗಿ ಬಂದರೆ ಅವರನ್ನು ಸತಾಯಿಸಲಾಗುತ್ತಿದೆ.
ಯಾವ ಕೆಲಸವೂ ಆಗುತ್ತಿಲ್ಲ. ಸಾರ್ವಜನಿಕರು, ಜನಪ್ರತಿನಿಧಿಗಳು ಕರೆ ಮಾಡಿದರೂ ಪಿಡಿಓ ಸ್ಪಂದಿಸುತ್ತಿಲ್ಲ. ಉದ್ಯೋಗ ಖಾತ್ರಿ ಯೋಜನೆಯ ಫಲಾನುಭವಿಗೂ ಸಮರ್ಪಕ ನ್ಯಾಯ ಸಿಗುತ್ತಿಲ್ಲ ಎಂದು ಅಧ್ಯಕ್ಷೆ, ಉಪಾಧ್ಯಕ್ಷ ಆರೋಪಿಸಿದರು.

ವಾಸ್ತವವಾಗಿ ಇಲ್ಲಿರುವ ಕಾರ್ಯದರ್ಶಿ ದಾಮೋದರ ಅವರು ಮೂರು ದಿನ ನೆಲ್ಲಿಕಾರ್ ನಲ್ಲೂ ಮೂರು ದಿನ ಶಿರ್ತಾಡಿಯಲ್ಲೂ ಕೆಲಸ ಮಾಡಬೇಕಾಗಿದೆ. ದ್ವಿತೀಯ ದರ್ಜೆ ಗುಮಾಸ್ತ ಹುದ್ದೆ ತೆರವಾಗಿ 7 ವರ್ಷ ಕಳೆದಿದೆ. ಕ್ಲರ್ಕ್‌ ಕಂ ಡಾಟಾ ಎಂಟ್ರಿ ಆಪರೇಟರ್ ಇದ್ದಾರೆ. ಗುರುವಾರ ಬಂದಿರಲಿಲ್ಲ. ಜವಾನ ಹುದ್ದೆ ತೆರವಾಗಿ ಆರು ವರ್ಷಗಳು ಕಳೆದಿದೆ.

ಸ್ವಚ್ಚತೆಯ ಸಿಬಂದಿ ಹೆರಿಗೆ ರಜೆಯಲ್ಲಿದ್ದು, ಇನ್ನೈದು ತಿಂಗಳು ಬರಲಾರರು. ಗುರುವಾರ ಹಾಜರಾದವರೆಂದರೆ ಬಿಲ್ ಕಲೆಕ್ಟರ್ ಮತ್ತು ಪಂಪ್ ಆಪರೇಟರ್ ಮಾತ್ರ ! ಬಂದಿದ್ದ ಕಾರ್ಯದರ್ಶಿ ಸ್ವಲ್ಪ ಹೊತ್ತು ನೋಡಿ ಮತ್ತೆ ತಮ್ಮ ಮತ್ತೊಂದು ಕಾರ್ಯಸ್ಥಾನ ನೆಲ್ಲಿಕಾರ್ ಗೆ ಹೋದರೋ ಗೊತ್ತಾಗಲಿಲ್ಲ. ಬರೀ ಇಬ್ಬರ ಮೂಲಕ ಕಚೇರಿ ನಡೆಸಲು ಸಾಧ್ಯವೇ? ಎಂದು ಅಧ್ಯಕ್ಷೆ ಪ್ರಶ್ನಿಸಿದರು.

ಜನ ನಮ್ಮನ್ನು ಕೇಳುತ್ತಾರೆ, ಇಲ್ಲಿ ಕೆಲಸ ಆಗುವುದಿಲ್ಲ. ನಾವೇನು ಮಾಡಬೇಕು? ರಾಜೀನಾಮೆ ಕೊಟ್ಟು ಹೋಗಬೇಕೇ? ಎಂದು ಉಪಾಧ್ಯಕ್ಷ ಸಂತೋಷ್ ಕೋಟ್ಯಾನ್ ಕೇಳಿದರು.

ಕೊನೆಗೂ ತಾ.ಪಂ. ಕಾರ್ಯನಿರ್ವಹಣಾಧಿಕಾರಿಯಾಗಿ ಈಗ ಇಲ್ಲಿರುವ ಮೂರು ದಿನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಜೊತೆಗೆ ನೆಲ್ಲಿಕಾರ್ ಕಾರ್ಯದರ್ಶಿಯಾಗಿಯೂ ಮೂರು ದಿನ ಕಾರ್ಯನಿರ್ವಹಿಸುವ ಒತ್ತಡ ಇರುವ ದಾಮೋದರ ಅವರನ್ನೇ ಪ್ರಭಾರ ಪಿಡಿಓ ಆಗಿ ನಿಯೋಜಿಸಿದ ಆದೇಶ ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ.

ನಮಗೆ ಪೂರ್ಣಾವಧಿ, ಶಾಶ್ವತ ನೆಲೆಯ ಪಿಡಿಓ ಬೇಕು. ಯಾರಾದರೂ ಆದೀತು ಎಂದು ಸಂತೋಷ್ ಕೋಟ್ಯಾನ್ ಪ್ರತಿಕ್ರಿಯೆ ನೀಡಿದ್ದಾರೆ.

Leave a Reply

error: Content is protected !!
%d bloggers like this: