ನಗರದಲ್ಲಿ ಶುಕ್ರವಾರ (ಅ.13) ನಡೆದ ಮಹಿಷ ಉತ್ಸವದ ವೇಳೆ ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್ ಭಗವಾನ್ ಒಕ್ಕಲಿಗ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿಂದು ಪ್ರೊ.ಭಗವಾನ್ ನಿವಾಸಕ್ಕೆ ಮೈಸೂರು ಚಾಮರಾಜ ಕ್ಷೇತ್ರದ ಒಕ್ಕಲಿಗರ ಸಂಘದಿಂದ ಮುತ್ತಿಗೆಗೆ ಯತ್ನಿಸಲಾಯಿತು.
ಅವಹೇಳನಕಾರಿ ಹೇಳಿಕೆಯಿಂದ ಆಕ್ರೋಶಗೊಂಡಿದ್ದ ಪ್ರತಿಭಟನಾಕಾರರು ಮನೆಗೆ ಮುತ್ತಿಗೆಹಾಕಲು ಯತ್ನಿಸಿದರು. ಬ್ಯಾರಿಕೇಡ್ ಕಿತ್ತು ಭಗವಾನ್ ಮನೆಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ಹಾಗೂ ತಳ್ಳಾಟ ನೂಕಾಟವೂ ನಡೆದಿದ್ದು, ಕೆಲವರು ಕೈ ಮತ್ತು ಹಣೆಯ ಭಾಗಕ್ಕೆ ಗಾಯವನ್ನೂ ಮಾಡಿಕೊಂಡರು.
ಶುಕ್ರವಾರ ಮಹಿಷ ಉತ್ಸವ ಕಾರ್ಯಕ್ರಮದಲ್ಲಿ ಪ್ರೊ.ಭಗವಾನ್ ಒಕ್ಕಲಿಗರು ಸಂಸ್ಕೃತಿ ಹೀನರೆಂದು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದರಿಂದ ರೊಚ್ಚಿಗೆದ್ದ ಒಕ್ಕಲಿಗ ಸಮುದಾಯದ ಮುಖಂಡರು ಭಗವಾನ್ ಮನೆಗೆ ಮುತ್ತಿಗೆಹಾಕಲು ಯತ್ನಿಸಿದರು.
ಒಕ್ಕಲಿಗ ಜನಾಂಗಕ್ಕೆ ಸಂಸ್ಕೃತಿ ಕಲಿಸಿ, ಭಗವಾನ್ ತಾವೂ ಒಕ್ಕಲಿಗ ಸಮುದಾಯದವರು ಎಂದು ಹೇಳಿಕೊಳ್ಳುತ್ತಾರೆ. ಮತ್ತೊಂದುಕಡೆ ಸಮುದಾಯವನ್ನೇ ನಿಂದಿಸುತ್ತಾರೆ. ಅವರು ಒಕ್ಕಲಿಗ ಸಮುದಾಯದವರು ಎಂಬುದೇ ಅನುಮಾನವಿದೆ. ಅವರನ್ನು ಈಗಲೆ ಕರೆಸಿ, ಇಲ್ಲವೇ ದೂರು ನೀಡುತ್ತೇವೆ. ಕೂಡಲೇ ಎಫ್‌ಐಆರ್ ಮಾಡಿಸಿ ಎಂದು ಪಟ್ಟು ಹಿಡಿದಿದ್ದಾರೆ.
ಸದ್ಯ ಭಗವಾನ್ ಮನೆಗೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಸ್ಥಳದಲ್ಲಿ ರಾಜ್ಯ ಮೀಸಲು ಪಡೆ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.