
ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೆ ಶರಣ್ಯೇ ತ್ರಯಂಬಿಕೇ ಗೌರಿ ನಾರಾಯಣಿ ನಮೋಸ್ತುತೆ. ದೇಶಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುವ ನವರಾತ್ರಿ ಹಬ್ಬಕ್ಕೆ ಇನ್ನೇನು ಕ್ಷಣಗಣನೆ ಶುರುವಾಗಿದೆ. ಒಂಬತ್ತು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಜಗನ್ಮಾತೆಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ಮೊದಲನೆಯ ದಿನ ಶೈಲಪುತ್ರಿ, ಎರಡನೇ ದಿನ ಬ್ರಹ್ಮಚಾರಿಣಿ, ಮೂರನೇ ದಿನ ಚಂದ್ರಘಂಟಾ, ನಾಲ್ಕನೆಯ ದಿನ ಕೂಷ್ಮಾಂಡ ದೇವಿ, ಐದನೇ ದಿನ ಸ್ಕಂದ ಮಾತಾ, ಆರನೇ ದಿನ ಕಾತ್ಯಾಯಿನಿ, ಏಳನೇ ದಿನ ಕಾಳರಾತ್ರಿ, ಎಂಟನೆಯ ದಿನ ಮಹಾಗೌರಿ, ಒಂಬತ್ತನೆಯ ದಿನ ಸಿದ್ಧಿದಾತ್ರಿ ಹೀಗೆ ಒಂಬತ್ತು ದಿನ ದೇವಿಯ ನವ ಅವತಾರಗಳನ್ನು ಪೂಜಿಸಲಾಗುತ್ತದೆ. ಅದರ ಜೊತೆಗೆ ಈ ಒಂಬತ್ತು ದಿನಗಳಲ್ಲಿ ನವದುರ್ಗೆಯರಿಗೆ ಪ್ರಿಯವಾದ ಬಣ್ಣದ ವಸ್ತ್ರದಿಂದ ಅಲಂಕರಿಸಲಾಗುತ್ತದೆ. ಈ ಒಂಬತ್ತು ಬಣ್ಣಗಳಿಗೂ ಅದರದ್ದೇ ಆದ ವಿಶೇಷತೆಯಿದೆ. ನೀವು ಕೂಡಾ ಈ ನವರಾತ್ರಿಯ ಹಬ್ಬದಂದು ನವದುರ್ಗೆಯರಿಗೆ ಪ್ರಿಯವಾದ ಬಣ್ಣದ ಸೀರೆ ಅಥವಾ ಉಡುಗೆಯನ್ನು ತೊಟ್ಟು ದೇವಿಯನ್ನು ಪೂಜಿಸಬಹುದು. ಹಾಗಾದರೆ ನವರಾತ್ರಿ ಹಬ್ಬದಂದು ಯಾವ ದಿನ ಯಾವ ಬಣ್ಣದ ಸೀರೆ ಧರಿಸಿದರೆ ಶ್ರೇಷ್ಠ ಮತ್ತು ಈ ನವಬಣ್ಣಗಳ ಮಹತ್ವವೇನು ಎಂಬುದನ್ನು ತಿಳಿಯೋಣ.
ನವರಾತ್ರಿ ಹಬ್ಬದಂದು ಯಾವ ದಿನ ಯಾವ ಬಣ್ಣದ ಉಡುಗೆಯನ್ನು ಧರಿಸಿದರೆ ಸೂಕ್ತ? ಆ ಬಣ್ಣಗಳ ಮಹತವವೇನು ಇಲ್ಲಿದೆ ಮಾಹಿತಿ:
ಮೊದಲನೇ ದಿನ, ಕೇಸರಿ ಬಣ್ಣ:
ನವರಾತ್ರಿಯ ಮೊದಲ ದಿನ ಪಾಡ್ಯ. ಈ ದಿನದಂದು ಕಳಶ ಪ್ರತಿಷ್ಠಾಪಿಸಿ ನವರಾತ್ರಿ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ. ಈ ದಿನ ಶೈಲಪುತ್ರಿಯನ್ನು ಪೂಜಿಸಲಾಗುತ್ತದೆ. ದೇವಿ ಶೈಲಪುತ್ರಿಗೆ ಕಿತ್ತಳೆ ಬಣ್ಣವೆಂದರೆ ಪ್ರಿಯವಾದುದು. ಈ ದಿನ ನೀವು ಕಿತ್ತಳೆ ಬಣ್ಣದ ಉಡುಗೆಯನ್ನು ತೊಟ್ಟು ದೇವಿಯನ್ನು ಪೂಜಿಸಬಹುದು. ಈ ಬಣ್ಣದ ಮಹತ್ವವನ್ನು ನೋಡುವುದಾರೆ ಕಿತ್ತಳೆ ಬಣ್ಣವು ಶಕ್ತಿ ಮತ್ತು ಸಂತೋಷದ ಭಾವನೆಯನ್ನು ನೀಡುತ್ತದೆ ಮತ್ತು ಕಿತ್ತಳೆ ಬಣ್ಣವು ಧನಾತ್ಮಕ ಶಕ್ತಿಯನ್ನು ರವಾನಿಸುತ್ತದೆ.
ಎರಡನೇ ದಿನ, ಬಿಳಿಬಣ್ಣ:
ನವರಾತ್ರಿ ಹಬ್ಬದ ಎರಡನೇ ದಿನದಂದು ಮಾತೆ ಬ್ರಹ್ಮಚಾರಿಣಿಯನ್ನು ಪೂಜಿಸಲಾಗುತ್ತದೆ. ಈ ದಿನ ಬಿಳಿ ಬಣ್ಣದ ಉಡುಗೆಯನ್ನು ತೊಟ್ಟರೆ ಶ್ರೇಷ್ಠ ಎಂದು ಹೇಳಲಾಗುತ್ತದೆ. ಏಕೆಂದರೆ ಬ್ರಹ್ಮಚಾರಿಣಿ ದೇವಿಗೆ ಬಿಳಿ ಬಣ್ಣವು ಪ್ರಿಯವಾದುದು. ಈ ಬಣ್ಣದ ಮಹತ್ವವನ್ನು ನೋಡುವುದಾದರೆ ಬಿಳಿ ಬಣ್ಣವು ಶುದ್ಧತೆ ಮತ್ತು ಶಾಂತಿಯ ಸಂಕೇತವಾಗಿದೆ. ಅಲ್ಲದೆ ಬಿಳಿ ಬಣ್ಣವು ಆತ್ಮವಿಶ್ವಾಸವನ್ನು ಸಹ ಹೆಚ್ಚಿಸುತ್ತದೆ.
ಮೂರನೇ ದಿನ, ಕೆಂಪು:
ನವರಾತ್ರಿ ಹಬ್ಬದ ಮೂರನೇ ದಿನದಂದು ಚಂದ್ರಘಂಟಾ ದೇವಿಯನ್ನು ಪೂಜಿಲಾಗುತ್ತದೆ. ಈ ದಿನದಂದು ಕೆಂಪು ಬಣ್ಣವನ್ನು ಧರಿಸಿದರೆ ಶ್ರೇಷ್ಠ ಎಂದು ಹೇಳಲಾಗುತ್ತದೆ. ಕೆಂಪು ಬಣ್ಣವು ಜಗನ್ಮಾತೆಯ ನೆಚ್ಚಿನ ಬಣ್ಣವೆಂದು ಪರಿಗಣಿಸಲಾಗಿದೆ. ಈ ಬಣ್ಣದ ಮಹತ್ವವನ್ನು ನೋಡುವುದಾದರೆ ಕೆಂಪುಬಣ್ಣವು ಶಕ್ತಿ ಮತ್ತು ಪ್ರೀತಿಯ ಸಂಕೇತವಾಗಿದೆ.
ನಾಲ್ಕನೇ ದಿನ, ಕಡುನೀಲಿ ಬಣ್ಣ:
ನವರಾತ್ರಿಯ ನಾಲ್ಕನೇ ದಿನದಂದು ಜಗನ್ಮಾತೆಯ ಒಂಬತ್ತು ಅವತಾರಗಳಲ್ಲಿ ಒಂದಾದ ಕೂಷ್ಮಾಂಡ ದೇವಿಯನ್ನು ಪೂಜಿಸಲಾಗುತ್ತದೆ. ಕೂಷ್ಮಾಂಡ ದೇವಿಗೆ ಪ್ರಿಯವಾದ ಬಣ್ಣವೆಂದರೆ ಕಡುನೀಲಿ ಬಣ್ಣ. ಈ ದಿನ ಕಡುನೀಲಿ ಬಣ್ಣದ ಬಟ್ಟೆಯನ್ನುಟ್ಟು ದೇವಿಯನ್ನು ಪೂಜಿಸಿದರೆ ಶ್ರೇಷ್ಠ ಎಂದು ಹೇಳಲಾಗುತ್ತದೆ. ಈ ಬಣ್ಣವು ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ಸೂಚಿಸುತ್ತದೆ.
ಐದನೇ ದಿನ: ಹಳದಿಬಣ್ಣ:
ಈ ದಿನದಂದು ಸ್ಕಂದ ಮಾತೆಯನ್ನು ಪೂಜಿಸಲಾಗುತ್ತದೆ. ಅಲ್ಲದೆ ಈ ಐದನೇ ದಿನ ದೇವಿಗೆ ಹಳದಿ ಬಣ್ಣದ ಸೀರೆಯನ್ನುಟ್ಟು ಅಲಂಕರಿಸುತ್ತಾರೆ. .ಈ ಬಣ್ಣದ ಮಹತ್ವವನ್ನು ನೋಡುವುದಾದರೆ ಹಳದಿ ಬಣ್ಣವು ಖುಷಿ, ಉತ್ಸಾಹ ಮತ್ತು ಸಕಾರಾತ್ಮಕತೆಯನ್ನು ಸಂಕೇತಿಸುತ್ತದೆ. ಅಲ್ಲದೆ ಹಳದಿ ಬಣ್ಣವು ಶುಭದ ಸಂಕೇತವಾಗಿದೆ. ಹಾಗಾಗಿ ಹಳದಿ ಬಣ್ಣದ ಉಡುಗೆಯನ್ನು ಧರಿಸಿ ದೇವಿಯನ್ನು ಪೂಜಿಸುವುದರಿಂದ ಅದೃಷ್ಟ ಬರುತ್ತದೆ ಎಂಬ ನಂಬಿಕೆಯಿದೆ.
ಆರನೇ ದಿನ, ಹಸಿರುಬಣ್ಣ:
ನವರಾತ್ರಿಯ ಆರನೇ ದಿನ ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನ ಹಸಿರು ಬಣ್ಣದ ಉಡುಗೆಯನ್ನು ತೊಟ್ಟರೆ ಶ್ರೇಷ್ಠ ಎಂದು ಹೇಳಲಾಗುತ್ತದೆ. ಈ ಬಣ್ಣದ ಮಹತ್ವವೇನೆಂದರೆ ಹಸಿರು ಬಣ್ಣವು ಹೊಸ ಆರಂಭ ಮತ್ತು ಸಮೃದ್ಧಿ ಮತ್ತು ಏಳಿಗೆಯ ಸಂಕೇತವಾಗಿದೆ.
ಏಳನೇ ದಿನ ಬೂದುಬಣ್ಣ:
ಈ ದಿನದಂದು ಜಗನ್ಮಾತೆಯ ಒಂಬತ್ತು ಅವತಾರಗಳಲ್ಲಿ ಒಂದಾದ ಕಾಳರಾತ್ರಿಯನ್ನು ಪೂಜಿಸಲಾಗುತ್ತದೆ. ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿ ಹಾಗೂ ದುಷ್ಟಶಕ್ತಿಗಳನ್ನು ನಾಶಮಾಡಲು ಕಾಳರಾತ್ರಿಯನ್ನು ಪೂಜಿಸಲಾಗುತ್ತದೆ. ಈ ದಿನ ಬೂದು ಬಣ್ಣದ ಉಡುಗೆಯನ್ನುಟ್ಟು ಜಗನ್ಮಾತೆಯನ್ನು ಪೂಜಿಸಿದರೆ ಶ್ರೇಷ್ಠ ಎಂದು ಹೇಳಲಾಗುತ್ತದೆ. ಈ ಬಣ್ಣದ ಮಹತ್ವವೇನೆಂದರೆ ಬೂದು ಬಣ್ಣವು ಭಾವನೆಗಳನ್ನು ಸಮನ್ವಯಗೊಳಿಸುತ್ತದೆ.
ಎಂಟನೇ ದಿನ ನೇರಳೆ ಬಣ್ಣ:
ನವರಾತ್ರಿಯ ಎಂಟನೇ ದಿನದಂದು ಮಹಾಗೌರಿಯನ್ನು ಪೂಜಿಸಲಾಗುತ್ತದೆ. ಮಹಾಗೌರಿಯನ್ನು ಪೂಜಿಸುವುದರಿಂದ ಜೀವನದಲ್ಲಿ ಎಲ್ಲಾ ದುಃಖಗಳಿಂದ ಪರಿಹಾರ ಸಿಗುತ್ತದೆ ಎಂದು ಹೇಳಲಾಗುತ್ತದೆ. ಮಹಾಗೌರಿಗೆ ಪ್ರಿಯವಾದ ಬಣ್ಣವೆಂದರೆ ನೇರಳೆ ಬಣ್ಣ. ಈ ಬಣ್ಣವು ಶ್ರೀಮಂತಿಕೆ ಮತ್ತು ಸಮೃದ್ಧಿಯನ್ನು ಪ್ರತಿನಿಧಿಸುತ್ತದೆ.
ಒಂಬತ್ತನೇ ದಿನ ಪಿಕಾಕ್ ಗ್ರೀನ್ ಬಣ್ಣ:
ನವರಾತ್ರಿ ಹಬ್ಬದ ಒಂಬತ್ತನೇ ದಿನದಂದು ಸಿದ್ಧಿದಾತ್ರಿ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನ ಪಿಕಾಕ್ ಗ್ರೀನ್ ಬಣ್ಣದ ಉಡುಗೆಯನ್ನು ತೊಟ್ಟು ದೇವಿಯನ್ನು ಪೂಜಿಸಿದರೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಈ ಬಣ್ಣದ ಮಹತ್ವವನ್ನು ನೋಡುವುದಾದರೆ ಇದು ಸಹಾನುಭೂತಿಯನ್ನು ಪ್ರತಿನಿಧಿಸುತ್ತದೆ.

