ಏಕದಿನ ವಿಶ್ವಕಪ್ – ಪಾಕಿಸ್ತಾನದ ವಿರುದ್ಧ ಭಾರತಕ್ಕೆ 7 ವಿಕೆಟ್‌‌ಗಳ ಭಾರೀ ಜಯ

ಶೇರ್ ಮಾಡಿ

ವಿಶ್ವದ ಅತೀ ದೊಡ್ಡ ಕ್ರೀಡಾಂಗಣ “ನರೇಂದ್ರ ಮೋದಿ ಸ್ಟೇಡಿಯಂ’ನಲ್ಲಿ ಜಾಗತಿಕ ಕ್ರಿಕೆಟಿನ ಬದ್ಧ ಎದುರಾಳಿಗಳ ಶನಿವಾರದ ಹೋರಾಟದಲ್ಲಿ ಪರಿಪೂರ್ಣ ಮೇಲುಗೈ ಸಾಧಿಸಿದ ಭಾರತ ಅಮೋಘ ಜಯ ದಾಖಲಿಸಿ ಈ ವಿಶ್ವಕಪ್‌ನ ಹ್ಯಾಟ್ರಿಕ್‌ ಜಯವನ್ನು ಸ್ಮರಣೀಯವಾಗಿಸಿದೆ. ಪಾಯಿಂಟ್ಸ್ ಟೇಬಲ್ ನಲ್ಲಿ ಅಗ್ರಸ್ಥಾನಕ್ಕೆ ಏರಿದೆ.

ಏಕದಿನ ವಿಶ್ವಕಪ್‌ನಲ್ಲಿ ಈವರೆಗೆ ಭಾರತದ ವಿರುದ್ಧ ಪಾಕಿಸ್ಥಾನ ಗೆದ್ದದ್ದೇ ಇಲ್ಲ. 1992ರಿಂದ ಮೊದಲ್ಗೊಂಡು 2019ರ ವರೆಗಿನ ಎಲ್ಲ 8 ಪಂದ್ಯಗಳಲ್ಲೂ ಟೀಮ್‌ ಇಂಡಿಯಾ ಜಯಭೇರಿ ಮೊಳಗಿಸಿದೆ.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ಬಿಗಿ ಬೌಲಿಂಗ್ ದಾಳಿ ಸಂಘಟಿಸಿತು. ಅತ್ಯುತ್ತಮ ನಿರ್ವಹಣೆ ತೋರಿದ ಎಲ್ಲ ಬೌಲರ್ ಗಳು ಬ್ಯಾಟಿಂಗ್ ಬಲವಿರುವ ಪಾಕಿಸ್ಥಾನವನ್ನು 42.5 ಓವರ್ ಗಳಲ್ಲಿ 191 ರನ್ ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಗುರಿ ಬೆನ್ನಟ್ಟಿದ ಭಾರತ 30.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು.

ನಾಯಕ ರೋಹಿತ್ ಶರ್ಮ ಮತ್ತೆ ಅಬ್ಬರಿಸಿದರು. 63 ಎಸೆತಗಳಲ್ಲಿ 86 ರನ್ ಗಳಿಸಿ ಔಟಾದರು. 6 ಸಿಕ್ಸರ್ ಮತ್ತು 6 ಬೌಂಡರಿ ಗಳನ್ನು ಬಾರಿಸಿದರು. ಶುಭಮನ್ ಗಿಲ್ 16 ರನ್ ಗಳಿಸಿ ಔಟಾದರು. ವಿರಾಟ್ ಕೊಹ್ಲಿ ಕೂಡ 16 ರನ್ ಗಳಿಸಿ ಔಟಾದರು. ಉತ್ತಮ ನಿರ್ವಹಣೆ ತೋರಿದ ಶ್ರೇಯಸ್ ಅಯ್ಯರ್ ತಾಳ್ಮೆಯ ಆಟವಾಡಿ ಅರ್ಧಶತಕ ಗಳಿಸಿದರು. ಬೌಂಡರಿ ಮೂಲಕ ಗೆಲುವಿನ ಗುರಿ ತಲುಪಿದರು. 62 ಎಸೆತಗಳಲ್ಲಿ ಅಜೇಯ 53 ಗಳಿಸಿದರು. ಕೆ ಎಲ್ ರಾಹುಲ್ 19 ರನ್ ಗಳಿಸಿ ಔಟಾಗದೆ ಉಳಿದರು.

ಭಾರತದ ಪರ ಬಿಗಿ ದಾಳಿ ನಡೆಸಿದ ಜಸ್ಪ್ರೀತ್ ಬುಮ್ರಾ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 7 ಓವರ್ ಗಳಲ್ಲಿ 1 ಮೇಡನ್ ಸಹಿತ 19 ರನ್(2.70ಎಕಾನಮಿ) ಮಾತ್ರ ಬಿಟ್ಟು ಕೊಟ್ಟು 2 ವಿಕೆಟ್ ಕಿತ್ತಿದ್ದರು.

ಪಾಕ್ ಪರ ಆರಂಭಿಕರಾದ ಅಬ್ದುಲ್ಲಾ ಶಫೀಕ್ 20, ಇಮಾಮ್-ಉಲ್-ಹಕ್ 36 ರನ್ ಗಳಿಸಿ ಔಟಾದರು. ಶಫೀಕ್ ಅವರನ್ನು ಸಿರಾಜ್ ಎಲ್ಬಿಡಬ್ಲ್ಯೂ ಮಾಡುವ ಮೂಲಕ ಮೊದಲ ವಿಕೆಟ್ ಕಬಳಿಸಿ ಆಘಾತ ನೀಡಿದರು.

ನಾಯಕ ಬಾಬರ್ ಆಜಮ್ ಗರಿಷ್ಠ 50 ರನ್ ಗಳಿಸಿ ಔಟಾದರೆ ಮೊಹಮ್ಮದ್ ರಿಜ್ವಾನ್ 49 ರನ್ ಗಳಿಸಿದ್ದ ವೇಳೆ ಔಟಾದರು. ,ಸೌದ್ ಶಕೀಲ್ 6, ಇಫ್ತಿಕರ್ ಅಹ್ಮದ್4 , ಶಾದಾಬ್ ಖಾನ್ 2, ಮೊಹಮ್ಮದ್ ನವಾಜ್4 , ಹಸನ್ ಅಲಿ 12 , ಹಾರಿಸ್ ರೌಫ್ 2 ರನ್ ಗಳಿಸಿ ಔಟಾದರು. ಶಾಹೀನ್ ಅಫ್ರಿದಿ (2) ಔಟಾಗದೆ ಉಳಿದರು.

ಪ್ರತಿಷ್ಠೆಯ ಪಂದ್ಯದಲ್ಲಿ ಅಮೋಘ ನಿರ್ವಹಣೆ ತೋರಿದ ಭಾರತದ ಬೌಲರ್ ಗಳು ನಿರೀಕ್ಷೆಗೂ ಮೀರಿದ ನಿರ್ವಹಣೆ ತೋರಿ ಗಮನಸೆಳೆದರು. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲದೀಪ್ ಯಾದವ್ ಅವರು ತಲಾ 2 ವಿಕೆಟ್ ಪಡೆದರು.

Leave a Reply

error: Content is protected !!