ಮೂರು ಬೈಕ್ ಗಳ ನಡುವೆ ಅಪಘಾತ: ಓರ್ವ ಸವಾರ ಮೃತ್ಯು

ಶೇರ್ ಮಾಡಿ

ಕೋಡಿ ಕನ್ಯಾನ-ಪಾರಂಪಳ್ಳಿ ಪಡುಕೆರೆ ಮುಖ್ಯ ರಸ್ತೆಯಲ್ಲಿ ಅ 15 ರಂದು ರಾತ್ರಿ 8-30 ರ ವೇಳೆ ಮೂರು ಬೈಕ್ ಗಳ ನಡುವೆ ಸರಣಿ ಅಪಘಾತ ಸಂಭವಿಸಿ ಗಾಯಗೊಂಡಿದ್ದ ಮೂವರು ಸವಾರರ ಪೈಕಿ ಓರ್ವ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ರವಿ ಪೂಜಾರಿ(30) ಮೃತ ಬೈಕ್ ಸವಾರ. ಮೆಕ್ಯಾನಿಕ್ ಆಗಿದ್ದ ಇವರು ಕೋಟದಲ್ಲಿ ಗ್ಯಾರೇಜ್ ನಡೆಸುತ್ತಿದ್ದರು. ತಂದೆ, ತಾಯಿಗೆ ಒಬ್ಬನೇ ಮಗನಾಗಿ ಮನೆಗೆ ಆಧಾರವಾಗಿದ್ದರು.

ಘಟನೆ ವಿವರ
ಪ್ರಶಾಂತ ಎಂಬವರು ಬೈಕನ್ನು ಕೋಡಿ ಕನ್ಯಾನ ಕಡೆಯಿಂದ ಪಡುಕೆರೆ ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಸೂಚನೆ ಇಲ್ಲದೇ ನಿರ್ಲಕ್ಷವಾಗಿ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿನ ಎಡ ಭಾಗಕ್ಕೆ ಢಿಕ್ಕಿ ಹೊಡೆದು ಒಮ್ಮೇಲೆ ಬಲಕ್ಕೆ ಚಲಾಯಿಸಿದ್ದಾರೆ. ಈ ವೇಳೆ ಕೋಡಿ ಕನ್ಯಾನ ಕಡೆಯಿಂದ ಪಡುಕೆರೆ ಕಡೆಗೆ ಬರುತ್ತಿದ್ದ ರವಿ ಪೂಜಾರಿ ಬೈಕ್ ಎದುರಿನಿಂದ ಬರುತ್ತಿದ್ದ ಚರಣ್‌ರವರ ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಮೂರೂ ಬೈಕ್ ಗಳು ರಸ್ತೆಗೆ ಎಸೆಯಲ್ಪಟ್ಟಿವೆ.

ಮೂರು ಪ್ರತ್ಯೇಕ ಬೈಕ್ ಗಳಲ್ಲಿ ಇದ್ದ ಸವಾರರಾದ ರವಿ ಪೂಜಾರಿ, ಚರಣ್‌ ರಿಗೆ ಕುತ್ತಿಗೆಗೆ ಎದೆಗೆ ಸೇರಿ ಗಂಭೀರ ಸ್ವರೂಪದ ಗಾಯವಾಗಿದ್ದು, ಪ್ರಶಾಂತ ಎಂಬವರಿಗೆ ಕೈಗೆ ಗಾಯವಾಗಿತ್ತು. ಮೂವರನ್ನೂ ಚಿಕಿತ್ಸೆಗೆ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಪಘಾತಕ್ಕೆ ಕಾರು ಚಾಲಕ ಸೂಚನೆ ನೀಡದೇ ನಿರ್ಲಕ್ಷವಾಗಿ ನಿಲ್ಲಿಸಿರುವುದು ಮತ್ತು ಬೈಕ್ ಸವಾರ ಪ್ರಶಾಂತ್ ಅವರ ಅತೀವೇಗ ಹಾಗೂ ನಿರ್ಲಕ್ಷ್ಯ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!