ಲಾರಿಯೊಂದು ಕೆಟ್ಟು ನಿಂತ ಪರಿಣಾಮ ಆರು ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದ ಘಟನೆ ನೇತ್ರಾವತಿ ನದಿಯ ಹೊಸಸೇತುವೆಯಲ್ಲಿ ಸಂಭವಿಸಿದೆ. ಅಕಾಲಿಕವಾಗಿ ಸುರಿದ ಮಳೆಯಿಂದ ವಾಹನಗಳು ಒಂದರ ಹಿಂದೆಯಂತೆ ಅಪ್ಪಳಿಸಿರುವುದಾಗಿ ತಿಳಿದುಬಂದಿದೆ.
ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ತೆರಳುತ್ತಿದ್ದ ಲಾರಿ ಸೇತುವೆ ಮಧ್ಯಭಾಗದಲ್ಲಿ ಕೆಟ್ಟು ನಿಂತಿದೆ. ಇದೇ ವೇಳೆ ಭಾರೀ ಮಳೆ ಆರಂಭವಾಗಿತ್ತು. ನಿಯಂತ್ರಣ ಕಳೆದುಕೊಂಡ ಆಲ್ಟೋ ಕಾರು ಲಾರಿ ಹಿಂಬದಿಗೆ ಢಿಕ್ಕಿ ಹೊಡೆದಿದೆ.
ಬಳಿಕ ಒಂದರ ಹಿಂದೆ ಇನ್ನೊಂದರಂತೆ ರಿಟ್ಝ್ ಕಾರು, ಕಾಂಟೆಸ್ಸಾ ಕಾರು, ಪಿಕಪ್ ವಾಹನ ಕೊನೆಯದಾಗಿ ಕುಂಪಲ ಕಡೆಗೆ ತೆರಳುವ ಖಾಸಗಿ ಬಸ್ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕೆಲವರಿಗೆ ಸ್ವಲ್ಪಗಾಯಗಳಾಗಿವೆ. ಸರಣಿ ಅಪಘಾತದಿಂದಾಗಿ ರಾ.ಹೆ 66 ರಲ್ಲಿ ಎರಡು ಗಂಟೆಗಳ ಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಸುಗಮ ವಾಹನ ಸಂಚಾರಕ್ಕೆ ವಾಹನಗಳನ್ನು ತೆರವು ಮಾಡಿದರು.