ಕೊಡಗಿನ ಕುಲದೇವಿ ನಾಡಿನ ಜೀವನದಿ ಕಾವೇರಿ ನಿಗದಿಯಂತೆ ಕರ್ಕಾಟಕ ಲಗ್ನದಲ್ಲಿ ತೀರ್ಥ ರೂಪಿಣಿಯಾಗಿ ನೆರೆದಿದ್ದ ಸಾವಿರಾರು ಭಕ್ತರಿಗೆ ದರ್ಶನ ನೀಡಿದ್ದಾಳೆ.
ಮಂಗಳವಾರ ರಾತ್ರಿ 11 ಗಂಟೆಯಿಂದಲೇ ತಲಕಾವೇರಿಯ ಪ್ರಧಾನ ಅರ್ಚಕ ಗುರುರಾಜ್ ಆಚಾರ್ ಅವರ ನೇತೃತ್ವದಲ್ಲಿ ಸಹಸ್ರ ನಾಮಾರ್ಚನೆ, ಪುಷ್ಪಾರ್ಚನೆ ಮತ್ತು ಕುಂಕುಮಾರ್ಚನೆ ನಡೆಯಿತು. ತೀರ್ಥೋದ್ಭವದ ಸಮಯ ಹತ್ತಿರವಾಗುತ್ತಿದ್ದಂತೆ ಭಕ್ತರ ಹರ್ಷೋದ್ಗಾರ ಹೆಚ್ಚುತ್ತಲೇ ಇತ್ತು.
“ಉಕ್ಕಿ ಬಾ ತಾಯಿ” ಎಂದು ಕಾವೇರಿ ಮಾತೆಯನ್ನು ನೆನೆಯುತ್ತಾ ಭಜಿಸುತ್ತಿದ್ದರು. ನಿಗದಿತ ಸಮಯದ ಒಂದು ನಿಮಿಷದ ಮೊದಲೇ ಕರ್ಕಾಟಕ ಲಗ್ನದಲ್ಲಿ ರಾತ್ರಿ 1 ಗಂಟೆ 26 ನಿಮಿಷಕ್ಕೆ ಬ್ರಹ್ಮ ಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ದರ್ಶನ ನೀಡಿದಳು. ತೀರ್ಥೋದ್ಭವಾಗುತ್ತಿದ್ದಂತೆ ತೀರ್ಥರೂಪಿಣಿಯಾದ ಕಾವೇರಿ ಮಾತೆಯನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಸ್ಥಳದಲ್ಲಿದ್ದ ಅರ್ಚಕರು ಭಕ್ತರಿಗೆ ಕಾವೇರಿ ತೀರ್ಥವನ್ನು ಪ್ರೋಕ್ಷಣೆ ಮಾಡಿದರು.
ಕಾವೇರಿ ತೀರ್ಥೋದ್ಭವವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಭಾಗಮಂಡಲದಿಂದ 8 ಕಿ.ಮೀ ದೂರದ ತಲಕಾವೇರಿವರೆಗೆ ಕಾಲ್ನಡಿಗೆಯಲ್ಲಿ ಆಗಮಿಸಿದರು. ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟ ಭಕ್ತರು ಕಾವೇರಿ ಮಾತೆಯನ್ನು ನೆನೆಯುತ್ತಾ ತಲಕಾವೇರಿ ತಲುಪಿದರು. ಕೊಡಗು ಅಷ್ಟೇ ಅಲ್ಲದೇ ಹೊರ ಜಿಲ್ಲೆ ಮತ್ತು ಹೊರ ರಾಜ್ಯ ತಮಿಳುನಾಡಿನಿಂದಲೂ ಅಪಾರ ಸಂಖ್ಯೆಯ ಭಕ್ತರು ತಲಕಾವೇರಿಗೆ ಆಗಮಿಸಿದ್ದರು.
ಕೊಡಗು ಉಸ್ತುವಾರಿ ಸಚಿವ ಬೋಸರಾಜ್, ಮಡಿಕೇರಿ ಶಾಸಕ ಮಂಥರ್ ಗೌಡ, ವಿರಾಜಪೇಟೆ ಶಾಸಕ ಎಎಸ್ ಪೊನ್ನಣ್ಣ, ಸಂಸದ ಪ್ರತಾಪ್ ಸಿಂಹ ಈ ವೇಳೆ ಭಾಗಿಯಾಗಿ ತೀರ್ಥ ಕುಂಡಿಕೆಯ ಬಳಿ ನಿಂತು ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಸಚಿವ ಬೋಸರಾಜ್, ಕಾವೇರಿ ಮಾತೆ ಕೊಡಗು ಕರ್ನಾಟಕಕ್ಕೆ ಅಷ್ಟೇ ಅಲ್ಲ. ತಮಿಳುನಾಡಿಗೂ ಅನ್ನ ನೀರು ಒದಗಿಸುತ್ತಿದ್ದಾಳೆ. ಈ ಬಾರಿ ರಾಜ್ಯಕ್ಕೆ ಸಮೃದ್ಧಿ ನೀಡಲೆಂದು ಪ್ರಾರ್ಥಿಸಲಾಗಿದೆ ಎಂದರು.
ಪ್ರತಾಪ್ ಸಿಂಹ ಮಾತಾನಾಡಿ, ಕಾವೇರಿ ಮಾತೆ ನಿಗದಿತ ಸಮಯದಲ್ಲಿ ತೀರ್ಥ ರೂಪಿಣಿಯಾಗಿ ಹರಿದ್ದಾಳೆ. ಕಾವೇರಿ ಮಾತೆ ಮತ್ತೊಂದು ಬಾರಿ ಉಕ್ಕಿ ಹರಿಯಬೇಕು. ಆಗ ಮಾತ್ರ ರಾಜ್ಯ ಸಮೃದ್ಧಿಯಾಗಿ ಇರುತ್ತದೆ ಎಂದು ತಿಳಿಸಿದರು.
ಚಿತ್ರನಟಿ ಹರ್ಷಿಕಾ ಪೂಣಚ್ಚ, ಭುವನ್ ಪೋನ್ನಣ್ಣ, ವಿರಾಜಪೇಟೆ ಶಾಸಕ ಎ ಎಸ್ ಪೊನ್ನಣ್ಣ ಭಾಗಮಂಡಲದಿಂದ ಕಾಲ್ನಡಿಗೆಯಲ್ಲಿ ತಲಕಾವೇರಿಗೆ ಅಗಮಿಸಿ ಕಾವೇರಿ ಮಾತೆಯ ದರ್ಶನ ಪಡೆದರು.