ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನಲೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಅರಣ್ಯಧಿಕಾರಿಗಳು ವಲಯ ಅರಣ್ಯಾಧಿಕಾರಿ ಸಂಘದ ಅಧ್ಯಕ್ಷರಾದ ಜಿ.ಡಿ ದಿನೇಶ್ ಅವರ ನೇತೃತ್ವದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಗೆ ದೂರು ನೀಡಿದ್ದಾರೆ. ತಮಗೆ ಕರ್ತವ್ಯದ ಸಂದರ್ಭದಲ್ಲಿ ರಕ್ಷಣೆ ನೀಡುವಂತೆ ಕೋರಿ ಕರ್ನಾಟಕ ರಾಜ್ಯ ವಲಯ ಅರಣ್ಯಾಧಿಕಾರಿಗಳ ಸಂಘದಿಂದ ದೂರು ಸಲ್ಲಿಸಿದ್ದಾರೆ.
ಏನಿದು ಪ್ರಕರಣ?
ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಸರ್ವೆ ನಂಬರ್ 309 ರ ನಿಡ್ಲೆ ವಿಸ್ತೃತ ಬ್ಲಾಕ್ 2ರಲ್ಲಿ ಅಮ್ಮಿನಡ್ಕ-ಕೆದ್ದ ನಿವಾಸಿ ಲೋಲಾಕ್ಷ ಯಾನೆ ಅನಂತು ಅವರು ಅರಣ್ಯ ಇಲಾಖೆಯ ಜಾಗವನ್ನು ಒತ್ತುವರಿ ಮಾಡಿ ನೂತನ ಮನೆ ನಿರ್ಮಾಣಕ್ಕೆ ಮುಂದಾಗಿದ್ದರು. ಈ ಬಗ್ಗೆ ಮಂಗಳೂರು ಅರಣ್ಯ ಇಲಾಖೆಗೆ ದೂರು ಬಂದಿತ್ತು. ಈ ಹಿನ್ನೆಲೆ ಎಚ್ಚೆತ್ತ ಅರಣ್ಯ ಇಲಾಖೆ ಸಿಬ್ಬಂದಿ ಅ.6 ರಂದು ನೂತನ ಮನೆಯ ಫೌಂಡೇಶನ್ ತೆರವುಗೊಳಿಸಿದ್ದರು. ವಿಚಾರ ತಿಳಿದು ಶಾಸಕ ಹರೀಶ್ ಪೂಂಜ ಅಕ್ಟೋಬರ್ 7 ರಂದು ಸ್ಥಳಕ್ಕೆ ಭೇಟಿ ನೀಡಿ ಅರಣ್ಯಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಕರ್ತವ್ಯಕ ಅಡ್ಡಿಪಡಿಸಿ, ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪದ ಮೇಲೆ ಉಪ್ಪಿನಂಗಡಿ ವಲಯ ಅರಣ್ಯ ಅಧಿಕಾರಿ ಕೆ.ಕೆ.ಜಯಪ್ರಕಾಶ್ ನೀಡಿದ ದೂರು ಆಧರಿಸಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಐಪಿಸಿ 1860(U/S-143, 353, 504, 149) ಅಡಿಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.