ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಕಚೇರಿ ಲಾಕರ್‌ನಲ್ಲಿದ್ದ 1.24 ಕೋಟಿ ಕಳವು

ಶೇರ್ ಮಾಡಿ

ಇಡೀ ನಾಡು ದಸರಾ ಸಂಭ್ರಮದಲ್ಲಿದೆ. ಅದರಲ್ಲಿಯೂ ಈ ಸಲದ ದಸರಾ ಭಾನುವಾರ ಹಿಡಿದುಕೊಂಡೇ ಬಂದಿದ್ದರಿಂದ ಭರ್ಜರಿ ರಜೆಯ ಆಫರನ್ನೇ ನೀಡಿತ್ತು. ಆದರೆ ಈ ರಜೆಯ ಪ್ರಯೋಜನ ಪಡೆದುಕೊಂಡ ಕಳ್ಳರು ಧಾರವಾಡದಲ್ಲಿಭರ್ಜರಿ ಕರಾಮತ್ ತೋರಿಸಿದ್ದಾರೆ.

ಧಾರವಾಡದ ರಾಯಾಪುರ ಬಡಾವಣೆಯಲ್ಲಿರೋ ಧರ್ಮಸ್ಥಳ ಗ್ರಾಮಾಭಿವದ್ಧಿ ಸಂಘದ (SKDRDP) ಕಚೇರಿಯ ಲಾಕರ್ ಅನ್ನೇ ಕಳ್ಳರು ಲೂಟಿ ಮಾಡಿದ್ದಾರೆ. 1 ಕೋಟಿ 24 ಲಕ್ಷ ರೂ. ಹಣ ಎಗರಿಸಿದ್ದಾರೆ.

ಇಲ್ಲಿರೋ ಒಟ್ಟು ನಾಲ್ಕೂ ಲಾಕರ್ ಗಳನ್ನು ಮುರಿದಿರುವ ಕಳ್ಳರು, ಅಲ್ಲಿದ್ದ ಒಂದು ಪೈಸೆಯನ್ನೂ ಬಿಡದೆ ಕದ್ದುಕೊಂಡು ಹೋಗಿದ್ದಾರೆ. ಸೆಕ್ಯೂರಿಟಿ ಗಾರ್ಡ್‍ಗಳು ಊಟಕ್ಕೆ ಹೋದ ಸಮಯದಲ್ಲಿ ಕಚೇರಿಯ ಶೌಚಾಲಯದ ಕಿಟಕಿ ಮುರಿದು ಒಳನುಗ್ಗಿದ ಕಳ್ಳರು ಕೃತ್ಯ ಎಸಗಿದ್ದಾರೆ. ಸಿಸಿ ಟಿವಿ ಕ್ಯಾಮೆರಾ ಇಲ್ಲದ ಭಾಗದಿಂದ ಬಂದು ಕಳ್ಳತನ ಮಾಡಿರೋದು ಹಲವು ಅನುಮಾನ ಮೂಡಿಸಿದೆ.

ಧರ್ಮಸ್ಥಳ ಗ್ರಾಮಾಭಿವದ್ಧಿ ಸಂಘದ ಅಡಿಯಲ್ಲಿ ಜಿಲ್ಲೆಯಾದ್ಯಂತ ನಿತ್ಯವೂ ಸಂಗ್ರಹವಾಗುತ್ತಿದ್ದ ಹಣ ಅದೇ ದಿನ ಬ್ಯಾಂಕ್‍ಗೆ ಡೆಪಾಸಿಟ್ ಆಗುತ್ತಿತ್ತು. ಆದರೆ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಮಂಗಳವಾರ ಹಣವನ್ನು ಕಟ್ಟಲಾಗಿರಲಿಲ್ಲ. ಹೀಗಾಗಿ ಕಚೇರಿಯಲ್ಲಿನ ಲಾಕರ್ ನಲ್ಲೇ ಇಟ್ಟು ಹೋಗಿದ್ದರು. ಇದೆಲ್ಲ ತಿಳಿದುಕೊಂಡವರೇ ಕೃತ್ಯ ಎಸಗಿರಬಹುದು ಅಂತ ಶಂಕೆ ವ್ಯಕ್ತವಾಗಿದೆ.

ಸದ್ಯ ಕಚೇರಿಯ ಸಿಬ್ಬಂದಿ ಸೇರಿದಂತೆ ಪೊಲೀಸರು ತನಿಖೆ ನಡೆಸಿದ್ದಾರೆ.

ಖದೀಮರು ಯಾವುದೇ ಸುಳಿವು ಬಿಡದೇ ಇರೋದು ತನಿಖೆಗೆ ಸವಾಲಾಗಿದೆ. ಇದೇ ಕಾರಣಕ್ಕೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರೇ ಸ್ಥಳ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗೆ ಕಾರ್ಯೋನ್ಮುಖವಾಗಿದ್ದಾರೆ.

Leave a Reply

error: Content is protected !!
%d