ಜಗ್ಗೇಶ್​, ರಾಕ್​ಲೈನ್​ ವೆಂಕಟೇಶ್​ ಮನೆಯಲ್ಲಿ ಅರಣ್ಯಾಧಿಕಾರಿಗಳ ಶೋಧ; ಹುಲಿ ಉಗುರು ಕೇಸ್​ ತನಿಖೆ ಚುರುಕು

ಶೇರ್ ಮಾಡಿ

ಬೆಂಗಳೂರಿನ ಹಲವು ಕಡೆಗಳಲ್ಲಿ ಅರಣ್ಯಾಧಿಕಾರಿಗಳು ಶೋಧಕಾರ್ಯ ನಡೆಸುತ್ತಿದ್ದಾರೆ. ಹುಲಿ ಉಗುರು ಧರಿಸಿದ ಆರೋಪ ಎದುರಿಸುತ್ತಿರುವ ಅನೇಕ ಸೆಲೆಬ್ರಿಟಿಗಳ ಮನೆಯಲ್ಲಿ ತಪಾಸಣೆ ನಡೆಸಲಾಗಿದೆ. ಇಂದು (ಅಕ್ಟೋಬರ್​ 25) ಮಧ್ಯಾಹ್ನ ನಟ ದರ್ಶನ್​ ಅವರ ರಾಜರಾಜೇಶ್ವರಿ ನಿವಾಸಕ್ಕೆ ಅಧಿಕಾರಿಗಳು ಭೇಟಿ ನೀಡಿದರು. ಆ ಬಳಿಕ ನಟ ಜಗ್ಗೇಶ್​ ಮತ್ತು ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ ಅವರ ಮನೆಯಲ್ಲೂ ಅರಣ್ಯಾಧಿಕಾರಿಗಳ ಶೋಧ ಕಾರ್ಯ ನಡೆದಿದೆ. ಈ ಪ್ರಕರಣದ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಕೇಳಿಬರುತ್ತಿದೆ. ಅದರ ಪರಿಣಾಮವಾಗಿ ತನಿಖೆ ಚುರುಕುಗೊಂಡಿದೆ.

ತಾವು ಧರಿಸಿರುವುದು ನಿಜವಾದ ಹುಲಿ ಉಗುರು ಎಂದು ಸ್ವತಃ ಜಗ್ಗೇಶ್​ ಅವರು ಹೇಳಿದ್ದರು. ಈ ಹಿಂದೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದರು. ಆ ವಿಡಿಯೋ ವೈರಲ್​ ಆದ ಬಳಿಕ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಬೆಂಗಳೂರಿನ ಮಲ್ಲೇಶ್ವರದಲ್ಲಿ ಇರುವ ಅವರ ನಿವಾಸಕ್ಕೆ ಬಂದು ತಪಾಸಣೆ ನಡೆಸಿದ್ದಾರೆ.

ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ ಅವರು ಸದ್ಯ ವಿದೇಶಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಇದೆ. ಅವರ ಅನುಪಸ್ಥಿತಿಯಲ್ಲೇ ರಾಜಾಜಿನಗರದಲ್ಲಿ ಇರುವ ನಿವಾಸದಲ್ಲಿ ಪರಿಶೀಲನೆ ನಡೆಯುತ್ತಿದೆ. ಅವರ ಕಾರಿನ ಒಳಗೂ ಶೋಧ ಕಾರ್ಯ ನಡೆಸಲಾಗಿದೆ. ಈ ಸೆಲೆಬ್ರಿಟಿಗಳ ಬಳಿ ಇರುವುದು ನಿಜವಾದ ಹುಲಿ ಉಗುರು ಹೌದೋ ಅಲ್ಲವೋ ಎಂಬ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ನಿಜವಾದ ಹುಲಿ ಉಗುರು ಹೊಂದಿರುವುದು ಪತ್ತೆಯಾದರೆ ಜಗ್ಗೇಶ್​, ದರ್ಶನ್​, ರಾಕ್​ಲೈನ್​ ವೆಂಕಟೇಶ್, ನಿಖಿಲ್​ ಕುಮಾರ್​ ಮುಂತಾದ ಸೆಲೆಬ್ರಿಟಿಗಳು ಕೂಡ ವರ್ತೂರು ಸಂತೋಷ್​ ರೀತಿಯೇ ಜೈಲು ವಾಸು ಅನುಭವಿಸಬೇಕಾದ ಪ್ರಸಂಗ ಎದುರಾಗುವ ಸಾಧ್ಯತೆ ಇದೆ.

Leave a Reply

error: Content is protected !!
%d