ಆನೆ ಹಾವಳಿಗೆ ಶಾಶ್ವತ ಪರಿಹಾರಕ್ಕೆ ಸರಕಾರಕ್ಕೆ ಒತ್ತಡ: ರೈತರ ಹಕ್ಕೊತ್ತಾಯ ಮೆರವಣಿಗೆ ಸಭೆಯಲ್ಲಿ ಎಂ.ಎಲ್.ಸಿ ಹರೀಶ್ ಕುಮಾರ್

ಶೇರ್ ಮಾಡಿ

ಕಡಬ ತಾಲೂಕಿನ ಹೆಚ್ಚಿನ ಗ್ರಾಮಗಳಲ್ಲಿ ನಡೆಯುವ ಆನೆ ಹಾವಳಿಗೆ ಶಾಶ್ವತ ಪರಿಹಾರ ನೀಡಬೇಕು ಆನೆಗಳನ್ನು ಸ್ಥಳಾಂತರ ಮಾಡಬೇಕು ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರೂ ಸೇರಿದಂತೆ ಜಿಲ್ಲೆಯೆ ಶಾಸಕರು ವಿಧಾನ ಸಭೆಯಲ್ಲಿ ಈಗಾಗಲೇ ಅಗ್ರಹ ಹಾಗೂ ಹಕ್ಕೊತ್ತಾಯವನ್ನು ಮಂಡಿಸಿದ್ದಾರೆ. ಅರಣ್ಯ ಸಚಿವರಿಗೂ ಮನವಿ ಮಾಡಿದ್ದೇವೆ ಪರಿಣಾಮ ಸರಕಾರದಿಂದ ಸೂಕ್ತ ಭರವಸೆ ಕೂಡಾ ದೊರೆತಿದೆ ಎಂದು ವಿಧಾನ ಸಭಾ ಸದಸ್ಯ ಹರೀಶ್ ಕುಮಾರ್ ಭರವಸೆ ನೀಡಿದರು.

ಅವರು ಗುರುವಾರ ಕಡಬದಲ್ಲಿ ಆನೆಗಳ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಅಗ್ರಹಿಸಿ ಐತ್ತೂರು-ಮರ್ಧಾಳ ಜಾಗೃತ ರೈತ ಕುಟುಂಬಗಳ ಒಕ್ಕೂಟದ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ಹಾಗೂ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ರೈತರ ಬದುಕು ಇನ್ನೂ ಹಸನಾಗಿಲ್ಲ. ರೈತ ಯಾವತ್ತೂ ಸಂಕಷ್ಟದಲ್ಲೇ ಬದುಕುತ್ತಿದ್ದಾನೆ. ಹುಟ್ಟಿನಿಂದ ಸಾಯುವ ತನಕ ಸಾಲದಲ್ಲೇ ಇರುತ್ತಾನೆ, ಇದರೊಟ್ಟಿಗೆ ಕಾಡು ಪ್ರಾಣಿಗಳ ಹಾವಳಿ ಹಿಂದಿನಿಂದಲೂ ಇದೆ ಇತ್ತೀಚಿನ ವರ್ಷದಲ್ಲಿ ಅದು ಮಿತಿಮೀರಿದೆ. ಮೂಡಿಗೆರೆ ತಾಲೂಕಿನ ಶೃಂಗೇರಿಯಿಂದ ಹಿಡಿದು ಸುಬ್ರಹ್ಮಣ್ಯ ತನಕ ಆನೆಗಳ ದಾಳಿಯಿಂದಾಗಿ ರೈತರು ಸಾವನ್ನಪ್ಪುತ್ತಿದ್ದಾರೆ. ಕೃಷಿ ಹಾನಿಯಾಗುತ್ತಲೇ ಇದೆ, ಆನೆಗಳ ಹಾವಳಿಗೆ ಶಾಶ್ವತ ಪರಿಹಾರ ಒದಗಿಸುವುದು, ರೈತರ ಹಿತ ಕಾತಯುವುದು ಸರಕಾರದ ಕರ್ತವ್ಯ, ಅದು ಯಾವುದೇ ಸರಕಾರ ಬಂದರೂ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಹಾಗಿಲ್ಲ. ಸರಕಾರ ಈಗಾಗಲೇ ಮೂಡಿಗೆರೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಬೇಲಿ ನಿರ್ಮಾಣ ಮಾಡಿ ಆನೆಗಳ ಹಾವಳಿಯನ್ನು ತಗ್ಗಿಸಿದೆ, ಅದೇ ತಂತ್ರಜ್ಞಾನ ಅಥವಾ ರೈಲ್ವೇ ಕಂಬಿ ಬೇಲಿ ನಿರ್ಮಾಣ ಮಾಡಿ ಆನೆಗಳಿಗೆ ಕಡಿವಾಣ ಹಾಕಬಹುದಾ ಎಂದು ತಜ್ಞರಲ್ಲಿ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದ ಹರೀಶ್ ಕುಮಾರ್ ಸರಕಾರ ಈ ಭಾಗದ ರೈತರ ಬೇಡಿಕೆಗೆ ಖಂಡಿತ ಸ್ಪಂದಿಸುತ್ತದೆ ನಾನು ನಿಮ್ಮೊಂದಿಗೆ ಇದ್ದೇನೆ, ನಿಮ್ಮ ಹಕ್ಕೊತ್ತಾಯವನ್ನು ಸರಕಾರದ ಮಟ್ಟದಲ್ಲಿ ಚರ್ಚಿಸಿ ಶೀಘ್ರ ಕ್ರಮ ಜರಗಿಸುವಂತೆ ಮಾಡುತ್ತೇನೆ, ಇನ್ನೊಮ್ಮೆ ಹಕೊತ್ತಾಯ ಮಂಡನೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದು ಅಭಯ ನೀಡಿದರು.

ಐತ್ತೂರು ಮರ್ಧಾಳ ಜಾಗೃತ ರೈತ ಕುಟುಂಬಗಳ ಒಕ್ಕೂಟದ ಅಧ್ಯಕ್ಷ ಅತ್ಯಡ್ಕ ನಾರಾಯಣ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಪಿ.ಪಿ.ವರ್ಗೀಸ್, ಕೃಷ್ಣ ಶೆಟ್ಟಿ ಕಡಬ, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಅನಿಲ್ ಈಶೋ ಮತ್ತಿತರರು ಮಾತನಾಡಿ ಕಡಬ ತಾಲೂಕಿನ ಬಿಳಿನೆಲೆ, ಕೈಕಂಬ, ಕೊಂಬಾರು ಸಿರಿಬಾಗಿಲು, ರೆಂಜಲಾಡಿ, ನೂಜಿಬಾಳ್ತಿಲ, ಕೌಕ್ರಾಡಿ, ಇಚ್ಲಂಪಾಡಿ, ಸುಬ್ರಹ್ಮಣ್ಯ, ಐನೆಕಿದು ಮುಂತಾದ ಗ್ರಾಮದ ಜನ ಆನೆ ಹಾವಳಿಯಿಂದಾಗಿ ಭೀತಿಯಿಂದ ಬದುಕುವಂತಾಗಿದೆ. ಯಾವುದೇ ಕೃಷಿ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನಲ್ಲಿ ಆನೆಯ ಆರ್ಭಟಕ್ಕೆ ಮೂವರು ಬಲಿಯಾಗಿದ್ದಾರೆ. ದುರಂತ ತಪ್ಪಿಸಲು ಈವರೆಗೆ ಸರಕಾರ ಮಾಡಿರುವ ಕಾರ್ಯಗಳು ಪ್ರಯೋಜನಕ್ಕೆ ಬಂದಿಲ್ಲ. ರೈತರು ಭಯದಿಂದ ಬದುಕುವುದು ತಪ್ಪಿಲ್ಲ. ಸರಕಾರ ಕೂಡಲೇ ಎಚ್ಚೆತ್ತು, ಆನೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಬೇಕು, ರೈಲ್ವೇ ಕಂಬಿಯ ಬೇಲಿ ನಿರ್ಮಾಣ ಮಾಡಬೇಕು, ವೈಜ್ಞಾನಿಕವಾಗಿ ಅಗಲು ನಿರ್ಮಾಣ ಮಾಡಬೇಕು ಆನೆ ದಾಳಿಯಿಂದ ಕೃಷಿ ಹಾನಿ ಹಾಗೂ ಪ್ರಾಣ ಹಾನಿಗೆ ಸೂಕ್ತ ಪರಿಹಾರ ದೊರೆಯಬೇಕು ಎಂದು ಅಗ್ರಹಿಸಿದರು.

ಕಡಬ ಕೃಷಿ ಪತ್ತಿನ ಸಹಕಾರಿ ಸಂಘದ ಕಛೇರಿಯ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕಡಬ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿ ಆಡಳಿತ ಸೌಧದ ಎದರು ಸಮಾಪನಗೊಂಡರು. ಉಪತಹಸೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ ಮನವಿ ಸ್ವೀಕರಿಸಿದರು. ಒಕ್ಕೂಟದ ಪದಾಧಿಕಾರಿ ತಮ್ಮಯ್ಯ ಗೌಡ ಮನವಿ ಓದಿದರು. ಉಮೇಶ್ ಶೆಟ್ಟಿ ಸಾಯಿರಾಮ್ ಕಾರ್ಯಕ್ರಮ ನಿರೂಪಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ, ಪುತ್ತೂರು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಪುಲಸ್ತ್ಯಾ ರೈ, ಮಾಜಿ ಸದಸ್ಯರಾದ ಗಣೇಶ್ ಕೈಕುರೆ, ಉಷಾ ಅಂಚನ್, ಎ.ಪಿ.ಎಂ.ಸಿ ಮಾಜಿ ಸದಸ್ಯ ಮೇದಪ್ಪ ಗೌಡ ಡೆಪ್ಪುಣಿ, ಕಡಬ ಸಿ ಎ ಬ್ಯಾಂಕ್ ಅಧ್ಯಕ್ಷ ರಮೇಶ್ ಕಲ್ಪುರೆ, ಹೊಸಮಠ ಸಿ.ಎ ಬ್ಯಾಂಕ್ ಅಧ್ಯಕ್ಷ ಶಿವಪ್ರಸಾದ್ ಪುತ್ತಿಲ, ಕಡಬ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಕಾಂಗ್ರೇಸ್ ಮುಖಂಡರಾದ ವಿಜಯಕುಮರ್ ಸೊರಕೆ, ಅಶ್ರಫ್ ಶೇಡಿಗುಂಡಿ, ಹನೀಫ್ ಕೆ.ಎಂ, ಪ್ರಮುಖರಾದ ಜಯಚಂದ್ರ ರೈ ಕುಂಟೋಡಿ, ಮೋಹನ್ ಕೆರೆಕ್ಕೋಡಿ, ಚಂದ್ರಶೇಖರ ಗೌಡ ಹಳೆನೂಜಿ, ಪೂವಪ್ಪ ಗೌಡ ಐತ್ತೂರು, ಸತೀಶ್, ವೆಂಕಟ್ರಾಜ್ ಗೌಡ ಕೋಡಿಬೈಲ್, ಕೆ.ಟಿ.ಪಿಲಿಪ್, ಯೂಸೂಫ್ ಸುಂಕದಕಟ್ಟೆ, ಸತೀಶ್ ಮೀನಾಡಿ, ತೋಮಸ್ ಕೆ.ಜೆ, ನ್ಯಾಯವಾದಿ ಲೋಕೇಶ್ ಎಂ.ಜೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

error: Content is protected !!
%d