ಗೊತ್ತೋ ಗೊತ್ತಿಲ್ಲದೆಯೋ ನಿಮ್ಮ ಮನೆಯಲ್ಲಿ ವನ್ಯಜೀವಿ ವಸ್ತುಗಳಿದ್ದರೆ ಇಲಾಖೆಗೆ ಮರಳಿಸಲು 2 ತಿಂಗಳ ಕಾಲಾವಕಾಶ ನೀಡಲು ರಾಜ್ಯದ ಸರಕಾರ ತೀರ್ಮಾನಿಸಿದೆ. ಈ ಮೂಲಕ ಹುಲಿ ಉಗುರುಗಳ ಜಪ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗೊಂದಲಗಳಿಗೆ ತೆರೆ ಎಳೆಯಲು ರಾಜ್ಯ ಸರ್ಕಾರ ಮುಂದಾಗಿದೆ. ಇದರ ಬಗ್ಗೆ ಅಧಿಕೃತ ಹೇಳಿಕೆ ಇನ್ನಷ್ಟೇ ಹೊರ ಬರಬೇಕಿದೆ.
ಅಕ್ರಮವಾಗಿ ವನ್ಯಜೀವಿಗಳಿಂದ ಉತ್ಪಾದಿತ ವಸ್ತುಗಳನ್ನು ಸಂಗ್ರಹಿಸಿ ಇಟ್ಟುಕೊಂಡಿರುವವರಿಗೆ ಕೊನೆಯ ಅವಕಾಶ ನೀಡಲು ತೀರ್ಮಾನಿಸಿದ್ದು, ಪ್ರಾಣಿಗಳ ಚರ್ಮ, ಉಗುರು, ಕೊಂಬು ಸೇರಿದಂತೆ ವನ್ಯಜೀವಿಗೆ ಸಂಬಂಧಿಸಿ ಯಾವುದೇ ವಸ್ತುಗಳು ಮನೆಯಲ್ಲಿದ್ದರೆ ವಸ್ತು ವಾಪಸ್ ಕೊಡಲು 2 ತಿಂಗಳ ಕಾಲಾವಕಾಶ ನೀಡಲು ಚಿಂತನೆ ನಡೆದಿದೆ.
ಈ ಬಗ್ಗೆ ಅಭಿಪ್ರಾಯ ನೀಡಲು ಅಡ್ವೋಕೆಟ್ ಜನರಲ್ ಅವರಿಗೆ ಸರ್ಕಾರದಿಂದ ಪತ್ರ ಬರೆಯಲಾಗಿದೆ. ಅರಣ್ಯ ಹಾಗೂ ಪರಿಸರ ಸಚಿವ ಈಶ್ವರ ಖಂಡ್ರೆ ಈ ಸಂಬಂಧ ಪತ್ರ ಬರೆದಿದ್ದಾರೆ. ಕಾಲವಕಾಶ ನೀಡುವ ಸಂಬಂಧ ಎಜಿ ಅಭಿಪ್ರಾಯದ ಬಳಿಕ ತಿರ್ಮಾನ ತೆಗೆದುಕೊಳ್ಳಲಾಗುತ್ತದೆ. ಒಂದು ವೇಳೆ 2 ತಿಂಗಳ ಕಾಲಾವಕಾಶದೊಳಗೆ ವಸ್ತುಗಳನ್ನು ಸರ್ಕಾರಕ್ಕೆ ಒಪ್ಪಿಸದಿದ್ರೆ ಮೊಕದ್ದಮೆ ದಾಖಲಾಗಲಿದೆ.
ಕಾಲಾವಕಾಶ ನೀಡಲು ಸಿಎಂ ಸಿದ್ದರಾಮಯ್ಯ ಕೂಡ ಸಹಮತ ವ್ಯಕ್ತಪಡಿಸಿದ್ದು, ಈ ಸಂಬಂಧ ಶೀಘ್ರದಲ್ಲೇ ಆದೇಶ ಹೊರಡಿಸಲು ಅರಣ್ಯ ಇಲಾಖೆ ತಿರ್ಮಾನ ತೆಗೆದುಕೊಂಡಿದೆ.