ಧರ್ಮ ಕ್ಷೇತ್ರಗಳು ಆಕ್ರಮಣಕ್ಕೆ ಒಳಗಾದಾಗ ಸಮಾಜ ಅಲ್ಲೋಲಕಲ್ಲೋಲವಾಗುತ್ತವೆ. ಇದನ್ನು ತಡೆದು ಧರ್ಮಕ್ಷೇತ್ರ ಸಂರಕ್ಷಿಸುವ ಸದುದ್ದೇಶದೊಂದಿಗೆ ಧರ್ಮ ಸಂರಕ್ಷಣ ಯಾತ್ರಾ ಸಮಿತಿಯು ಅ.29ರಂದು ಮಧ್ಯಾಹ್ನ 2.30ಕ್ಕೆ ಉಜಿರೆಯಿಂದ ಧರ್ಮಸ್ಥಳಕ್ಕೆ ಧರ್ಮ ಸಂರಕ್ಷಣ ಯಾತ್ರೆ ಆಯೋಜಿಸಿದೆ.
ಮುಂದಿನ ಪೀಳಿಗೆಯವರಿಗೆ ಈ ಸನಾತನ ಧರ್ಮದ ಸಂದೇಶವನ್ನು ಅಳವಡಿಸಿಕೊಳ್ಳುವಂತೆ ಮಾರ್ಗ ದರ್ಶನ ನೀಡುವುದು ಯಾತ್ರೆಯ ಉದ್ದೇಶ. ಧರ್ಮ ಸಂರಕ್ಷಣ ಯಾತ್ರೆ ಸಮಿತಿಯ ಗೌರವಾಧ್ಯಕ್ಷ ಬಸ್ರೂರು ಅಪ್ಪಣ್ಣ ಹೆಗ್ಡೆ, ಸಂಚಾಲಕರಾದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ಕೃಷ್ಣ ಪಡುವೆಟ್ನಾಯ ಹಾಗೂ ಬರೋಡದ ಉದ್ಯಮಿ ಶಶಿಧರ್ ಶೆಟ್ಟಿ ಸಾರಥ್ಯದಲ್ಲಿ ಅ.28ರ ಬೆಳಗ್ಗೆ 9.30ಕ್ಕೆ ನಾಡಿನ ಪ್ರಸಿದ್ಧ ದೇವೀ ಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಿಂದ ಹೊರಡುವ ಯಾತ್ರೆಯು ಸಂಜೆ 6.10ಕ್ಕೆ ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ಸನ್ನಿಧಿಗೆ ಆಗಮಿಸಲಿದೆ.
ಅ.29ರಂದು ಬೆಳಗ್ಗೆ 7ಕ್ಕೆ ಕದ್ರಿಯಿಂದ ಹೊರಟು ಮಧ್ಯಾಹ್ನ 1ಕ್ಕೆ ಉಜಿರೆಯ ಶ್ರೀ ಜನಾರ್ದನ ದೇವಸ್ಥಾನವನ್ನು ತಲುಪಲಿದೆ. ಎಲ್ಲರಿಗೂ ಊಟದ ವ್ಯವಸ್ಥೆ ಇದೆ. ಅಲ್ಲಿಂದ ಮಧ್ಯಾಹ್ನ 2.30ಕ್ಕೆ ಉಭಯ ಜಿಲ್ಲೆಯ ಪ್ರಮುಖ ಮಠಾಧೀಶರು, ಸ್ವಾಮೀಜಿಗಳು, ಎಲ್ಲ ಪಕ್ಷದ ರಾಜಕೀಯ ಮುಖಂಡರು, ಸದ್ಭಕ್ತರ ಸಹಿತ ಸಹಸ್ರಾರು ಮಂದಿ ಸಾತ್ವಿಕರು ಪಾದಯಾತ್ರೆಯ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸನ್ನಿಧಿಗೆ ಬಂದು ಪ್ರಾರ್ಥನೆಯೊಂದಿಗೆ ಯಾತ್ರೆ ಸಂಪನ್ನಗೊಳ್ಳಲಿದೆ.
ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮ ರಕ್ಷಿಸುತ್ತದೆ ಎಂಬ ಸನಾತನ ಮೌಲ್ಯದಲ್ಲಿ ಶ್ರದ್ಧಾಭಕ್ತಿಗಳನ್ನಿರಿಸಿಕೊಂಡು ಧರ್ಮ ಸಂರಕ್ಷಣ ಯಾತ್ರೆ ಹಮ್ಮಿಕೊಳ್ಳಲಾಗಿದೆ. ನಾಡಿನ ಸ್ವಾಮೀಜಿಗಳು, ಧಾರ್ಮಿಕ ಶ್ರದ್ಧಾ ಕೇಂದ್ರಗಳ ಪ್ರಮುಖರು, ಸಜ್ಜನ ಬಂಧುಗಳು, ಭಕ್ತರು, ವಿವಿಧ ಸಂಘ-ಸಂಸ್ಥೆಗಳು ಸೇರಿ ಲಕ್ಷ ಮಂದಿ ಹೆಜ್ಜೆಹಾಕುವ ನಿರೀಕ್ಷೆಯಿದೆ ಎಂದು ಧರ್ಮಜಾಗೃತಿ ಸಮಿತಿ ಸಂಚಾಲಕ ಶಶಿಧರ್ ಶೆಟ್ಟಿ ತಿಳಿಸಿದ್ದಾರೆ.