ಸುಧೀರ್ ಅತ್ತಾವರ್ ನಿರ್ದೇಶನದ ‘ಕೊರಗಜ್ಜ’ ಸಿನಿಮಾ ಹಲವು ವಿಚಾರಕ್ಕೆ ಸುದ್ದಿ ಆಗುತ್ತಿದೆ. ಈ ಸಿನಿಮಾಗೆ ಒಂದಲ್ಲ ಒಂದು ಅಡ್ಡಿ ಆಗುತ್ತಲೇ ಇದೆ. ಕುದುರೆ ಮುಖ ಸಮೀಪದ ಕಳಸದಲ್ಲಿ ‘ಕೊರಗಜ್ಜ’ ಚಿತ್ರದ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಗೂಂಡಾಗಳು ದಾಳಿ ಮಾಡಿದ್ದಾರೆ. ಇದರಿಂದ ಚಿತ್ರಕ್ಕೆ ಹಿನ್ನಡೆ ಆಗಿದೆ. ಖ್ಯಾತ ಬಾಲಿವುಡ್ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ, ನಟಿ ಶುಭಾ ಪೂಂಜ ಮೊದಲಾದವರು ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಅದೃಷ್ಟವಶಾತ್ ಯಾರಿಗೂ ತೊಂದರೆ ಆಗಿಲ್ಲ. ಆದರೆ, ಸಿನಿಮಾ ಸೆಟ್ ನಾಶವಾಗಿದೆ.
ದೈವ ಆರಾಧನೆ ಮಾಡುವ ಸಮುದಾಯದಿಂದ ಈ ರೀತಿ ತೊಂದರೆ ಆಗಿದೆ ಎಂದು ನಿರ್ದೇಶಕ ಸುಧೀರ್ ಅವರು ಹೇಳಿದ್ದಾರೆ. ‘ಅಕ್ಟೋಬರ್ 27ರಂದು ಶೂಟ್ ನಡೆಯುತ್ತಿತ್ತು. ಬೆಳಿಗ್ಗೆ ಶೂಟ್ ಮಾಡಿದೆವು. ಮಧ್ಯಾಹ್ನ ಊಟದ ನಂತರ ಕೆಲವರು ತಲ್ವಾರ್ ಹಿಡಿದು ಸೆಟ್ಗೆ ಬಂದರು. ಅವರು ಆವೇಶದಲ್ಲಿ ಇದ್ದರು. ನಂತರ ಮತ್ತೊಂದು ತಂಡದವರು ಸೆಟ್ನ ಪರಿಶೀಲಿಸಿದ್ದಾರೆ. ಆ ಬಳಿಕ ಮೂರನೆ ತಂಡ ಕೂಡ ಬಂತು. ಮಾಹಿತಿ ನೀಡಿದ್ದಾರೆ ಸುಧೀರ್.
‘ನನಗೆ ನನ್ನ ಟೀಮ್ ಮುಖ್ಯವಾಗಿತ್ತು. ಹೀಗಾಗಿ, ತಂಡದ ಜೊತೆ ಹೊರಟೆ. ಮಂಗಳೂರಿನಲ್ಲಿ ಶೂಟ್ ಮಾಡುವಾಗಲೂ ಹೀಗೆಯೇ ಆಗಿತ್ತು. ಭೂತರಾಧನೆ ಕುರಿತು ಸಿನಿಮಾ ಮಾಡಬಾರದು ಎನ್ನುವ ಕಾರಣಕ್ಕೆ ಈ ರೀತಿ ಮಾಡಲಾಗಿದೆ ಅನಿಸುತ್ತದೆ. ಕೊರಗಜ್ಜನ ಬಗ್ಗೆ ಸಿನಿಮಾ ಮಾಡುತ್ತಿರುವ ಕಾರಣದಿಂದ ಈ ರೀತಿ ಮಾಡಲಾಗಿದೆ. ಬಹುಶಃ ಎಲ್ಲರೂ ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಅನಿಸುತ್ತಿದೆ’ ಎಂದಿದ್ದಾರೆ ಸುಧೀರ್.
ಈ ಮೊದಲು ‘ಕೊರಗಜ್ಜ’ ಸಿನಿಮಾ ಶೂಟ್ ಆರಂಭಕ್ಕೂ ಮುನ್ನ ಪುತ್ತೂರಿನಲ್ಲಿ ಸೆಟ್ ವಿರ್ಮಾಣ ಮಾಡಲಾಗುತ್ತಿತ್ತು. ಸೆಟ್ ಕೆಲಸಗಾರರು ಸೆಟ್ ನಿರ್ಮಾಣದ ವೇಳೆ ಯಾವುದೋ ಆವೇಶ ಬಂದಂತವರಾಗಿ ಅಲ್ಲಲ್ಲೇ ಮೂರ್ಛೆ ಹೋಗತೊಡಗಿದ್ದರು. ಸೆಟ್ ಹಾಕಲಿದ್ದ ಈ ಜಾಗ ಕರಾವಳಿಯ ಉಗ್ರ ರೂಪದ ದೈವ ಗುಳಿಗನ ಸ್ಥಳವೆಂದು ಸ್ಥಳಿಯರು ತಿಳಿಸಿದರು. ಆ ಬಳಿಕ ಬೇರೆ ಕಡೆ ಸೆಟ್ ನಿರ್ಮಾಣ ಮಾಡಲಾಯಿತು. ಕಬೀರ್ ಬೇಡಿ, ಶ್ರುತಿ, ಭವ್ಯ ಇನ್ನಿತರೆ ನಟರು ಸಿನಿಮಾದಲ್ಲಿ ನಟಿಸಿದ್ದಾರೆ.