ಟಿಶ್ಯೂ ಪೇಪರ್ ವಿಚಾರಕ್ಕೆ ಗಲಾಟೆ ನಡೆದ ಪರಿಣಾಮ ಪಾನ್ ಶಾಪ್ ಮಾಲೀಕ ಇಬ್ಬರು ಯುವಕರಿಗೆ ಚಾಕು ಇರಿದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದಿದೆ.
ವೀರೇಶ್ ಚಾಕು ಇರಿದ ಪಾನ್ ಶಾಪ್ ಮಾಲೀಕ. ಕ್ಷುಲ್ಲಕ ಕಾರಣಕ್ಕೆ ಇಬ್ಬರು ಯುವಕರನ್ನು ಅಟ್ಟಾಡಿಸಿ ವೀರೇಶ್ ಚಾಕು ಇರಿದಿದ್ದಾನೆ.
ಗಲಾಟೆಯಲ್ಲಿ ರಮೇಶ್ ಮತ್ತು ಸತ್ತರ್ ಎಂಬವರಿಗೆ ಗಂಭೀರ ಗಾಯಗಳಾಗಿವೆ. ರಮೇಶ್ ಹಾಗೂ ಸತ್ತರ್ ಸ್ನೇಹಿತರ ಜೊತೆ ಡಾಬಾದಲ್ಲಿ ಊಟ ಮಾಡುತ್ತಿದ್ದರು. ಈ ವೇಳೆ ಡಾಬಾದ ಒಳಗಡೆ ಬಂದಿದ್ದ ಪಾನ್ ಶಾಪ್ ಮಾಲೀಕ ವಿರೇಶ್‌ನನ್ನು ಕಂಡು ವೇಟರ್ ಟಿಶ್ಯೂ ಪೇಪರ್ ಕೊಡು ಎಂದು ಸತ್ತರ್ ಕೇಳಿದ್ದಾನೆ. ಇದರಿಂದ ಗಲಾಟೆ ಆರಂಭಗೊಂಡಿದ್ದು, ಈರುಳ್ಳಿ ಕತ್ತರಿಸಲು ಇಟ್ಟಿದ್ದ ಚಾಕುವಿನಿಂದ ವೀರೇಶ್ ಯುವಕರಿಗೆ ಇರಿದಿದ್ದಾನೆ.
ಗಲಾಟೆ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಗಾಯಾಳುಗಳಿಗೆ ಮಾನ್ವಿ ಹಾಗೂ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ವಿರೇಶ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.