
ಬೆಳ್ತಂಗಡಿ: ವೈದ್ಯಕೀಯ ಚಿಕಿತ್ಸೆಯ ದಾಖಲೆ ನೀಡುವಂತೆ ನಡೆದ ತಂದೆ-ಮಗನ ಜಗಳ ವಿಕೋಪಕ್ಕೆ ತೆರಳಿ ತಂದೆಯೇ ಮಗನನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ನಿನ್ನೆ(ಅ.29) ರಾತ್ರಿ ಉಜಿರೆಯಲ್ಲಿ ಸಂಭವಿಸಿದೆ.
ಉಜಿರೆ ಗ್ರಾಮದ ಕೊಡೆಕಲ್ಲು ನಿವಾಸಿ ಕೃಷ್ಣಯ್ಯ ಆಚಾರ್(75ವ) ಅವರ ಪುತ್ರ ಜಗದೀಶ್(30ವ) ಎಂಬವರು ಈ ಘಟನೆಯಲ್ಲಿ ಮೃತಪಟ್ಟವರಾಗಿದ್ದಾರೆ. ಇವರ ತಂದೆ ಕೃಷ್ಣಯ್ಯ ಆಚಾರ್ ಚೂರಿಯಿಂದ ಇರಿದು ಮಗನನ್ನು ಕೊಲೆಗೈದ ಆರೋಪಿಯಾಗಿದ್ದಾರೆ.
ರಾತ್ರಿಯ ವೇಳೆ ವೈದ್ಯಕೀಯ ಚಿಕಿತ್ಸೆಯ ದಾಖಲೆ ನೀಡುವಂತೆ ತಂದೆ ಹಾಗೂ ಮಗನ ನಡುವೆ ಮಾತಿನ ಜಗಳ ನಡೆದಿದೆ. ಇದು ವಿಕೋಪಕ್ಕೆ ತಿರುಗಿದಾಗ ಕೃಷ್ಣಯ್ಯ ಆಚಾರ್ ಮನೆಯ ಕೋಣೆಯೊಳಗೆ ಹೋಗಿ ಚಿಲಕ ಹಾಕಿದ್ದಾರೆ ಮಗ ಜಗದೀಶ ಕಾಲಿನಿಂದ ತುಳಿದು ಬಾಗಿಲು ತೆಗೆಯಲು ಪ್ರಯತ್ನಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಕೃಷ್ಣಯ್ಯ ಆಚಾರ್ ಅಲ್ಲೇ ಕಪಾಟಿನಲ್ಲಿದ್ದ ಚೂರಿಯನ್ನು ತೆಗೆದು ಹೊರಬಂದು ಜಗದೀಶನಿಗೆ ಎಡ ಭುಜಕ್ಕೆ ಹಾಗೂ ಎಡ ಎದೆ ಭಾಗಕ್ಕೆ ಚೂರಿಯಿಂದ ಇರಿದಿದ್ದಾರೆ. ಇರಿತಕ್ಕೆ ಒಳಗಾಗಿ ಕುಸಿದು ಬಿದ್ದು ಜಗದೀಶ್ ಮೃತಪಟ್ಟಿದ್ದಾರೆನ್ನಲಾಗಿದೆ.
ಈ ಬಗ್ಗೆ ಜಗದೀಶನ ಅಣ್ಣ ಗಣೇಶ್ ನೀಡಿರುವ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣಾ ಅಕ್ರ ನಂ 107/2023 ಕಲಂ;302 ಐಪಿಸಿ ಪ್ರಕರಣ ದಾಖಲಿಸಲಾಗಿದೆ

