ವಿದ್ಯಾರ್ಥಿಯನ್ನು ಅಪಹರಿಸಿ ಹಾಸನದಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್

ಶೇರ್ ಮಾಡಿ

ಬೆಂಗಳೂರಿನ ಕಾಲೇಜು ವಿದ್ಯಾರ್ಥಿಯನ್ನು ಅಪರಿಚಿತರು ಕಿಡ್ನ್ಯಾಪ್ ಮಾಡಿ ಹಾಸನದಲ್ಲಿ ಬಿಟ್ಟು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನ ಅನಂತಪುರದ ಕೃಷ್ಣೇಗೌಡ ಎಂಬವರ ಪುತ್ರ ಚಿರಾಗ್ (17) ಖಾಸಗಿ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಆತನನ್ನು ಅಪಹರಣ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ನಿನ್ನೆ (ಮಂಗಳವಾರ) ಬೆಳಗ್ಗೆ ಯುವಕ ಕಾಲೇಜಿಗೆ ಹೋಗುತ್ತಿದ್ದ ವೇಳೆ ಏಕಾಏಕಿ ಎದುರಾದ ಕೆಲ ಅಪರಿಚಿತರು ವಿಳಾಸ ಕೇಳುವ ನೆಪದಲ್ಲಿ ವಿದ್ಯಾರ್ಥಿಯ ಪ್ರಜ್ಞೆ ತಪ್ಪಿಸಿ ನಂತರ ಅಪಹರಿಸಿದ್ದಾರೆ ಎಂದು ಚಿರಾಗ್ ತಿಳಿಸಿದ್ದಾನೆ.

ಚಿರಾಗ್ ಎಂದಿನಂತೆ ಬೆಳಗ್ಗೆ ಕಾಲೇಜಿಗೆ ಹೋಗುತ್ತಿದ್ದಾಗ ಈ ಕೃತ್ಯ ನಡೆದಿದೆ. ಪ್ರಜ್ಞಾಹೀನ ಸ್ಥಿತಿಯಲ್ಲೇ ಕಾರು ಹತ್ತಿದ್ದ ಹುಡುಗ ಎಚ್ಚರಗೊಂಡಾಗ ಅರಕಲಗೂಡು ಸಮೀಪ ಇರುವುದು ತಿಳಿದು ಬಂದಿದೆ. ಬೆಂಗಳೂರಿನಲ್ಲಿ ಕಿಡ್ನ್ಯಾಪ್ ಮಾಡಿ ಕಾರಿನಲ್ಲಿ ಹಾಸನಕ್ಕೆ ಬಂದ ದುಷ್ಕರ್ಮಿಗಳು, ವಿದ್ಯಾರ್ಥಿಯನ್ನು ಅರಕಲಗೂಡು ಸಮೀಪ ಬಿಟ್ಟು ಹೋಗಿದ್ದಾರೆ.

ಚಿರಾಗ್ ಎಚ್ಚರಗೊಂಡ ನಂತರ ಸಮೀಪದ ಮನೆಯೊಂದರ ಬಳಿ ತೆರಳಿ ತನ್ನ ಪೋಷಕರಿಗೆ ಫೋನ್ ಮಾಡಿದ್ದಾನೆ. ಕೂಡಲೇ ಹಾಸನಕ್ಕೆ ಬಂದ ಪೋಷಕರು, ಮಗನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಅಸ್ವಸ್ಥಗೊಂಡಿರುವ ವಿದ್ಯಾರ್ಥಿಗೆ ಹಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಹರಣ ಮಾಡಿದ್ದು ಯಾರು? ಯಾವ ಕಾರಣಕ್ಕೆ ಮಾಡಿದರು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆಸುವಂತೆ ಪೋಷಕರು ಒತ್ತಾಯಿಸಿದ್ದಾರೆ. ಈ ಸಂಬಂಧ ಬೆಂಗಳೂರಿನ ಯಲಹಂಕ ಪೊಲೀಸ್ ಠಾಣೆಯಲಿ ದೂರು ದಾಖಲಾಗಿದೆ.

Leave a Reply

error: Content is protected !!