ಬೆಂಗಳೂರು ಕಂಬಳಕ್ಕೆ ಈಗಾಗಲೇ ಭರದ ಸಿದ್ದತೆಗಳು ನಡೆಯುತ್ತಿದ್ದು ಸಾಕಷ್ಟು ಚರ್ಚೆಗಳು ಕಂಬಳ ಕುರಿತು ನಡೆಯುತ್ತಿದೆ. ಅದರಲ್ಲೂ ಕಂಬಳದಲ್ಲಿ ಗೆದ್ದ ಕೋಣಗಳಿಗೆ ಯಾವ ಬಹುಮಾನ ಸಿಗುತ್ತೆ ಅನ್ನೋದು ಸಹಜವಾಗಿ ಕರಾವಳಿಯೇತರ ಜನರಿಗಿರುವ ಕುತೂಹಲ. ಜೊತೆಗೆ ಅನೇಕ ಕರಾವಳಿಗರಿಗೂ ಈ ಡೌಟ್ ಇದೆ. ಅನೇಕ ಸಲ ಕಂಬಳದಲ್ಲಿ ಬಹುಮಾನಕ್ಕಿಂತ ಗೆಲ್ಲುವುದೇ ಒಂದು ಪ್ರೆಸ್ಟೀಜ್ ಅಂತ್ಹೇಳಿ ಸುಮ್ಮನಾಗುವುದುಂಟು. ಆದರೆ ಬೆಂಗಳೂರು ಕಂಬಳದಲ್ಲಿ ಬಹುಮಾನವೂ ಭರಪೂರ್ ಇದ್ದು ಆಕರ್ಷಕ ನಗದು ಮತ್ತು ಚಿನ್ನ ಹಾಗೂ ಚಿನ್ನದ ಪದಕಗಳನ್ನೊಳಗೊಂಡ ಬಹುಮಾನವಿರಲಿದೆ.
ಬೆಂಗಳೂರು ಕಂಬಳ ಒಟ್ಟು ಆರು ವಿಭಾಗಗಳಲ್ಲಿ ನಡೆಯಲಿದ್ದು ಆಕರ್ಷಕ ಕನೆಹಲಗೆ, ಅಡ್ಡಹಲಗೆ, ನೇಗಿಲು ಹಿರಿಯ ಮತ್ತು ಕಿರಿಯ ಜೊತೆಗೆ ಹಗ್ಗ ಹಿರಿಯ ಮತ್ತು ಕಿರಿಯ ಎಂಬ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಕನೆಹಲಗೆ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ 7.5 (ಏಳುವರೆ) ಕೋಲು ನಿಶಾನೆಗೆ ನೀರು ಹಾಯಿಸಿದವರಿಗೆ ಪ್ರಥಮ ಬಹುಮಾನವಾಗಿ 2 ಪವನ್ ಚಿನ್ನ ಮತ್ತು 1 ಲಕ್ಷ ರೂ ನಗದು ದೊರಕಲಿದೆ. ದ್ವಿತೀಯ ಬಹುಮಾನವಾಗಿ 6.5 (ಆರುವರೆ ಕೋಲು ) ನಿಶಾನೆಗೆ ನೀರು ಹಾಯಿಸಿದವರಿಗೆ 1 ಪವನ್ ಚಿನ್ನ ಮತ್ತು 50 ಸಾವಿರ ನಗದು ಘೋಷಿಸಲಾಗಿದೆ. ಕೆಲವೊಮ್ಮೆ ಎರಡು ಜೊತೆ ಕೋಣಗಳೂ ಪ್ರಥಮ ಬಹುಮಾನವನ್ನು ಬಾಚಿಕೊಳ್ಳುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಎರಡೂ ನಿಶಾನೆಗೆ ನೀರು ಹಾಯಿಸದೇ ಉಳಿಯುವ ಸಂದರ್ಭ ಬಂದಾಗ ನೀರಿನ ಎತ್ತರದ ಆಧಾರದಲ್ಲಿ ತೀರ್ಪುಗಾರರು ಪ್ರಥಮ, ದ್ವಿತೀಯ ಬಹುಮಾನ ನಿರ್ಧರಿಸುತ್ತಾರೆ. ಆದರೆ ಬೆಂಗಳೂರು ಕಂಬಳದಲ್ಲಿ ನೀರು ಹಾಯಿಸಿದರೆ ಮಾತ್ರ ಬಹುಮಾನ ಎಂದು ಘೊಷಿಸಲಾಗಿದೆ.
ಅಡ್ಡಹಲಗೆ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ 2 ಪವನ್ ಚಿನ್ನ ಮತ್ತು 1 ಲಕ್ಷ ರೂ ಬಹುಮಾನ ಇರಲಿದೆ. ದ್ವಿತೀಯ ಬಹುಮಾನವಾಗಿ 1 ಪವನ್ ಚಿನ್ನ ಮತ್ತು 50,000 ನಗದು ಇರಲಿದೆ. ಹಗ್ಗ ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ 1 ಪವನ್ ಚಿನ್ನ ಮತ್ತು 50 ಸಾವಿರ ರೂ ಬಹುಮಾನ ಇರಲಿದೆ. ದ್ವಿತೀಯ ಬಹುಮಾನವಾಗಿ 1/2 ಪವನ್ ಚಿನ್ನ ಮತ್ತು 25,000 ನಗದು ಇರಲಿದೆ. ಜೊತೆಗೆ ಈ ವಿಭಾಗದಲ್ಲಿ ತೃತೀಯ ಮತ್ತು ಚತುರ್ಥ ಬಹುಮಾನವಿದ್ದು ತೃತೀಯ ಮತ್ತು ಚತುರ್ಥ ಬಹುಮಾನವಾಗಿ 1/4 ಪವನ್ ಚಿನ್ನ ಮತ್ತ 20 ಸಾವಿರ ರೂಗಳನ್ನು ಸೆಮಿಫೈನಲ್ ಪ್ರವೇಶ ಮಾಡುವ ಕೋಣಗಳಿಗೆ ಘೋಷಿಸಲಾಗಿದೆ.
ನೇಗಿಲು ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಕ್ರಮವಾಗಿ ಪ್ರಥಮ ಬಹುಮಾನ 2 ಪವನ್ ಚಿನ್ನ ಮತ್ತು 1 ಲಕ್ಷ ರೂ ಬಹುಮಾನ ಇರಲಿದೆ. ದ್ವಿತೀಯ ಬಹುಮಾನವಾಗಿ 1 ಪವನ್ ಚಿನ್ನ ಮತ್ತು 50,000 ನಗದು ಇರಲಿದೆ. ಜೊತೆಗೆ ಈ ವಿಭಾಗದಲ್ಲಿ ತೃತೀಯ ಮತ್ತು ಚತುರ್ಥ ಬಹುಮಾನವಿದ್ದು ತೃತೀಯ ಮತ್ತು ಚತುರ್ಥ ಬಹುಮಾನವಾಗಿ ಸೆಮಿಫೈನಲ್ ಪ್ರವೇಶ ಮಾಡುವ ಕೋಣಗಳಿಗೆ 1/2 (ಅರ್ಧ) ಪವನ್ ಚಿನ್ನ ಮತ್ತು 25 ಸಾವಿರ ನಗದು ಬಹುಮಾನ ಘೋಷಿಸಲಾಗಿದೆ.
ಪ್ರತೀ ವಿಭಾಗದಲ್ಲಿ ಗೆದ್ದ ಕೋಣಗಳ ಜೊತೆ ಕೊಣ ಓಡಿಸಿದವರಿಗೂ ಬಹುಮಾನ ದೊರೆಯಲಿದೆ. ವಿಜೇತ ಕೋಣಗಳನ್ನು ಓಡಿಸಿದ ಓಟಗಾರರಿಗಾಗಿ ವಿಶೇಷ ಚಿನ್ನದ ಪದಕದ ಗೌರವವಿದೆ. ಇದರ ಜೊತೆಗೆ ಕಂಬಳ ವೀಕ್ಷಣೆಗೆ ಆಗಮಿಸಿದ ಕೆಲವು ಅಭಿಮಾನಿಗಳೂ ಬಹುಮಾನವಾಗಿ ಒಂದಿಷ್ಟು ಹಣ ಘೋಷಿಸುವ ಸಾಧ್ಯತೆ ಇರಲಿದೆ. ಈಗಾಗಲೇ ಬೆಂಗಳೂರಿಗೆ 130ಕ್ಕೂ ಅಧಿಕ ಜೊತೆ ಕೋಣಗಳು ಆಗಮಿಸುವ ಬಗ್ಗೆ ತಿಳಿಸಿದ್ದು ಕೋಣಗಳನ್ನು ಕರೆತರುವ ಮತ್ತು ವಾಪಾಸ್ ಕರೆದುಕೊಂಡು ಹೋಗುವ ಖರ್ಚಿಗಾಗಿ ಪ್ರತೀ ಜೊತೆ ಕೋಣಗಳಿಗೆ 25 ಸಾವಿರ ರೂಗಳನ್ನು ಗೌರವಧನವಾಗಿ ಕೊಡಲು ನಿರ್ಧರಿಸಲಾಗಿದೆ.
ಕನೆಹಲಗೆ ಎಂಬುದು ಕಂಬಳದಲ್ಲಿ ಅತ್ಯಂತ ಆಕರ್ಷಣೀಯ ವಿಭಾಗವಾಗಿದ್ದು ಕೋಣಗಳ ಓಟಕ್ಕಿಂತ ಓಟದ ಭರದಲ್ಲಿ ಎಷ್ಟು ಎತ್ತರಕ್ಕೆ ನೀರು ಚಿಮ್ಮಲಿದೆ ಎಂಬುದರ ಮೇಲೆ ಡಿಸೈಡ್ ಆಗುತ್ತದೆ. ಉಳಿದಂತೆ ಅಡ್ಡ ಹಲಗೆ ಅಡ್ಡಲಾಗಿರುವ ಹಲಗೆಯ ಮೇಲೆ ನಿಂತು ಓಡುವುದು, ಹಗ್ಗ ಮತ್ತು ನೇಗಿಲು ಕಟ್ಟಿ ಓಡಿಸುವ ವಿಭಾಗಗಳಿವೆ. ಕೋಣದ ಹಲ್ಲಿನ ಆಧಾರದಲ್ಲಿ ಹಿರಿಯ ಮತ್ತು ಕಿರಿಯ ವಿಭಾಗ ಎಂದು ಡಿಸೈಡ್ ಮಾಡಲಾಗುತ್ತದೆ. ಇದನ್ನು ನಿರ್ಧರಿಸಲು ಕಂಬಳ ನಡೆಯುವಾಗ ವಿಶೇಷ ತಜ್ಞರ ತಂಡ ಕಂಬಳದಲ್ಲಿರುತ್ತದೆ. ಇದೇ ಬರುವ ನವೆಂಬರ್ 25, 26 ರಂದು ಕಂಬಳ ಜಾತ್ರೆ ಅರಮನೆ ಮೈದಾನದಲ್ಲಿ ನಡೆಯಲಿದ್ದು ಭರದ ತಯಾರಿಗಳು ಶುರುವಾಗಿದೆ.