ಗ್ರಾಹಕರಂತೆ ಬಂದು ಹಾಡಹಗಲೇ ಗೂಡಂಗಡಿಯಿಂದ ನಗದು, ಪರ್ಸ್‌ ಕಳವು

ಶೇರ್ ಮಾಡಿ

ಬೈಕ್‌ನಲ್ಲಿ ಬಂದ ಅಪರಿಚಿತರಿಬ್ಬರು ಗೂಡಂಗಡಿಯಿಂದ ಹಣ ಎಗರಿಸಿ ಪರಾರಿಯಾದ ಘಟನೆ ಕೆಯ್ಯೂರು ಗ್ರಾಮದ ಮಾಡಾವಿನಲ್ಲಿ ಶುಕ್ರವಾರ ನಡೆದಿದೆ.

ಮಾಡಾವುಮಲೆ ಬಳಿ ಗೂಡಂಗಡಿ ವ್ಯಾಪಾರ ಮಾಡುತ್ತಿರುವ ಕೆಯ್ಯೂರು ಪಲ್ಲತ್ತಡ್ಕ ಕಟ್ಟಮನೆ ನಿವಾಸಿ ಪರಮೇಶ್ವರ ಆಚಾರ್ಯ ಅವರ ಅಂಗಡಿಯಿಂದ ಹಾಡಹಗಲೇ ಕಳ್ಳರು ಹಣ ಹಾಗೂ ಹಣ ಇದ್ದ ಪರ್ಸ್‌ ಅನ್ನು ಎಗರಿಸಿದ್ದಾರೆ.

ಅ.3ರಂದು ಮಧ್ಯಾಹ್ನ 1.50ಕ್ಕೆ ಬೆಳ್ಳಾರೆ ಕಡೆಯಿಂದ ಬೈಕ್‌ನಲ್ಲಿ ಬಂದ ಇಬ್ಬರು ಅಂಗಡಿಯಿಂದ ಸುಮಾರು 50 ಮೀಟರ್‌ ದೂರದಲ್ಲಿ ಬೈಕ್‌ ನಿಲ್ಲಿಸಿ ಅಂಗಡಿಗೆ ಬಂದಿದ್ದಾರೆ. ಸಿಗರೇಟ್‌ ಪಡೆದುಕೊಂಡು ಅಂಗಡಿಯ ಹೊರಗೆ ಹೋಗಿ ಸೇದಿದ್ದಾರೆ. ಬಳಿಕ ಕೂಲ್‌ಡ್ರಿಂಕ್‌ ತೆಗೆದುಕೊಂಡಿದ್ದಾರೆ.

ಸಿಗರೇಟ್‌ ಮತ್ತು ಕೂಲ್‌ಡ್ರಿಂಕ್‌ನ ಹಣವನ್ನು ಕೊಟ್ಟವರು ಸೆಖೆ ಇದೆ, ಸ್ವಲ್ಪ ಹೊತ್ತು ಕುಳಿತುಕೊಳ್ಳುತ್ತೇವೆ ಎಂದು ಹೇಳಿ ಕುಳಿತುಕೊಂಡಿದ್ದಾರೆ. ಇದೇ ವೇಳೆ ಪರಮೇಶ್ವರ ಆಚಾರ್ಯ ಅವರು ಊಟ ಮಾಡುತ್ತೇನೆ ಎಂದು ಹೇಳಿ ಬುತ್ತಿಯಲ್ಲಿ ತಂದಿದ್ದ ಅನ್ನವನ್ನು ಬಟ್ಟಲಿಗೆ ಹಾಕಿ ಊಟಕ್ಕೆ ಕುಳಿತುಕೊಂಡಿದ್ದಾರೆ. ಈ ವೇಳೆಗಾಗಲೇ ನಾವು ಹೋಗುತ್ತೇವೆ ಎಂದು ಹೇಳಿದ ಅಪರಿಚಿತರು ಅಂಗಡಿಯೊಳಗಿನಿಂದ ಹೊರ ನಡೆದಿದ್ದು, ಪರಮೇಶ್ವರ್‌ ಅನ್ನದ ಬಟ್ಟಲಿಗೆ ಕೈ ಹಾಕುವಷ್ಟರಲ್ಲಿ ಮತ್ತೆ ಅಂಗಡಿಯೊಳಗೆ ಓಡೋಡಿ ಬಂದ ಅಪರಿಚಿತರು ಅಂಗಡಿಯ ಟೇಬಲ್‌ ಮೇಲಿಟ್ಟಿದ್ದ ಬ್ಯಾಗ್‌ನಿಂದ ಹಣದ ಪರ್ಸ್‌ ಹಾಗೂ ಪುಸ್ತಕದೊಳಗಿಟ್ಟಿದ್ದ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.

ಪರ್ಸ್‌ ಹಾಗೂ ಪುಸ್ತಕದೊಳಗೆ ಸುಮಾರು 2,500 ರೂ. ಹಣ, ಕೆಲವು ದಾಖಲಿಗಳಿತ್ತು ಎಂದು ಅಂಗಡಿ ಮಾಲಕ ತಿಳಿಸಿದ್ದಾರೆ.

ಕನ್ನಡ, ತುಳು, ಮಲಯಾಳಂ ಭಾಷೆ
ಮೊದಲಿಗೆ ಪರಮೇಶ್ವರ ಆಚಾರ್ಯ ಅವರ ಬಳಿ ಕನ್ನಡ ಭಾಷೆಯಲ್ಲಿ ಸಿಗರೇಟ್‌ ಕೇಳಿದ್ದಾರೆ. ಆ ಬಳಿಕ ತುಳು ಭಾಷೆಯಲ್ಲಿ ಕೂಲ್‌ಡ್ರಿಂಕ್‌ ಕೇಳಿದ್ದಾರೆ. ಕೊನೆಯದಾಗಿ ಮಲಯಾಳಂ ಭಾಷೆಯಲ್ಲಿ ಮಾತನಾಡಿದ್ದಾರೆ. ನೀವು ಎಲ್ಲಿಯವರು ಎಂದು ಅಂಗಡಿ ಮಾಲಕ ವಿಚಾರಿಸಿದ್ದಕ್ಕೆ ನಾವು ಪುತ್ತೂರಿನವರು, ಟೈಲ್ಸ್‌ ಹಾಕುವ ಕೆಲಸ ಮಾಡಿಕೊಂಡಿದ್ದೇವೆ ಎಂದಿದ್ದಾರೆ.

Leave a Reply

error: Content is protected !!