ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ಸ್ವಾಸ್ಥ್ಯ ಸಂಕಲ್ಪ ಮಾಹಿತಿ ಕಾರ್ಯಗಾರ

ಶೇರ್ ಮಾಡಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಕಡಬ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ, ಪ್ರಗತಿ ಬಂದು ಸ್ವಸಹಾಯ ಸಂಘದ ಕೇಂದ್ರ ಒಕ್ಕೂಟ ಕಡಬ ಇವುಗಳ ಸಹಯೋಗದಲ್ಲಿ ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ತಾಲೂಕು ಮಟ್ಟದ ಸ್ವಾಸ್ಥ್ಯ ಸಂಕಲ್ಪ 2023 ಇದರ ಭಾಗವಾಗಿ ಮಾಹಿತಿ ಕಾರ್ಯಗಾರವು ನಡೆಯಿತು.

ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾದ ಉಡುಪಿ ಪ್ರಾದೇಶಿಕ ಕಚೇರಿಯ ಜನಜಾಗ್ರತಿ ಯೋಜನಾಧಿಕಾರಿಗಳಾದ ಗಣೇಶ್ ಆಚಾರ್ಯ ಇವರು ಮಾತನಾಡುತ್ತಾ “ಯುವಜನರು ನಮ್ಮ ದೇಶದ ಆಸ್ತಿ. ಇವತ್ತು ನಮ್ಮ ದೇಶ ವಿಶ್ವದಲ್ಲಿ ಪ್ರಸಿದ್ಧಿಯನ್ನು ಪಡೆದಿದೆ ಅಂತ ಆದರೆ ಅದು ಯುವಜನರ ಕಾರಣದಿಂದ. ಇಂತಹ ಯುವ ಜನರು ಬೇರೆ ಬೇರೆ ದುಷ್ಟ ಚಟಗಳಿಗೆ ಸಾಮಾನ್ಯವಾಗಿ ಆಕರ್ಷಿತರಾಗುತ್ತಾರೆ. ಇದಕ್ಕೆಲ್ಲ ಅವರ ಮನಸ್ಸಿನಲ್ಲಿರುವಂತಹ ಚಂಚಲತೆಯೇ ಕಾರಣ. ಈ ಚಂಚಲ ಮನಸ್ಸನ್ನು ಸರಿಯಾಗಿ ತಿದ್ದಿ, ಏಕಾಗ್ರತೆಯನ್ನು, ನಿಶ್ಚಲತೆಯನ್ನ ವಿದ್ಯಾರ್ಥಿಗಳು ಸಾಧಿಸಿದರೆ ಖಂಡಿತವಾಗಿಯೂ ಅವರು ಜೀವನದಲ್ಲಿ ಯಶಸ್ಸನ್ನ ಕಾಣುತ್ತಾರೆ. ಯಾವುದೇ ದುಷ್ಟ ಚಟಗಳ ಹತ್ತಿರವೂ ಕೂಡ ಅವರು ಹೋಗುವುದಿಲ್ಲ. ದುಷ್ಟ ಚಟಗಳ ಸಹವಾಸದಿಂದ ಅನೇಕ ಜನರು ಆರೋಗ್ಯವನ್ನು ಕಳೆದುಕೊಂಡಿದ್ದಾರೆ, ಜೀವನವನ್ನ ಕಳೆದುಕೊಂಡಿದ್ದಾರೆ. ವಿದ್ಯಾರ್ಥಿಗಳು ಇಂತಹ ಆಕರ್ಷಣೆಗಳಿಂದ ದೂರವಿದ್ದು, ನಿರಂತರ ಸಾಧನೆಯ ಮೂಲಕ ಸ್ವಸ್ಥ ಸಮಾಜವನ್ನು ಕಟ್ಟುವಲ್ಲಿ ಸಹಕರಿಸಬೇಕು” ಎಂದು ಹೇಳುತ್ತಾ ತಮ್ಮ ಶಕ್ತಿಯುತ ಮಾತಿನಿಂದ ವಿದ್ಯಾರ್ಥಿಗಳಲ್ಲಿ ಈ ಕುರಿತಾಗಿ ವಿಶೇಷ ಅರಿವನ್ನು ಮೂಡಿಸಿದರು.

ತಾಲೂಕು ಜನ ಜಾಗೃತಿ ವೇದಿಕೆ ಕಡಬ ಇದರ ಅಧ್ಯಕ್ಷರಾದ ಮತ್ತು ಪ್ರಸಿದ್ಧ ವಕೀಲರೂ ಆದ ಶ್ರೀ ಮಹೇಶ್ ಕೆ ಸವಣೂರು ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಪ್ರೌಢಶಾಲೆಯ ಮುಖ್ಯ ಗುರುಗಳಾದ ಶ್ರೀ ಸತೀಶ್ ಭಟ್ ವಹಿಸಿದ್ದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ತಾಲೂಕು ಯುವಜನ ಒಕ್ಕೂಟ ಕಡಬ ಇದರ ಅಧ್ಯಕ್ಷರಾದ ಶಿವಪ್ರಸಾದ್ ರೈ ಮೈಲೇರಿ, ಜನಜಾಗೃತಿ ವೇದಿಕೆ ಗೋಳಿತೊಟ್ಟು ವಲಯ ಇದರ ವಲಯದ ಅಧ್ಯಕ್ಷರಾದ ನೋಣಯ್ಯ ಪೂಜಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗೋಳಿತೊಟ್ಟು ವಲಯ ಇದರ ಮೇಲ್ವಿಚಾರಕರಾದ ಶ್ರೀಮತಿ ಸುಜಾತ ಉಪಸ್ಥಿತರಿದ್ದರು.

ಸೇವಾ ಪ್ರತಿನಿಧಿಯಾದ ನವೀನ್ ಕುಮಾರ್ ಸ್ವಾಗತಿಸಿದರು. ವಲಯ ಮೇಲ್ವಿಚಾರಕರಾದ ಶ್ರೀಮತಿ ಸುಜಾತ ಧನ್ಯವಾದ ಸಮರ್ಪಿಸಿದರು. ಉಪನ್ಯಾಸಕ ಚೇತನ್ ಎಂ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಶ್ರವಣ್ ಕುಮಾರ್ ಪ್ರಾರ್ಥಿಸಿದರು.

Leave a Reply

error: Content is protected !!
%d