ಬಿಗ್ ಬಾಸ್ ಮನೆಯಲ್ಲಿ ಕಾರ್ತಿಕ್ ಸಂಗೀತಾ, ನಮ್ರತಾ ಮತ್ತು ಸ್ನೇಹಿತ್ ನಡುವೆ ಒಂದು ಮಧುರ ಬಾಂಧವ್ಯ ಬೆಳೆಯುತ್ತಿದೆ. ಇತ್ತ ಮೈಕಲ್ ಹಾಗೂ ಈಶಾನಿ ತಾವಿಬ್ಬರೂ ಅಧಿಕೃತವಾಗಿ ಪ್ರೇಮಿಗಳು ಎಂದು ಘೋಷಿಸಿದ್ದರು. ಈ ಜೋಡಿ ಪ್ರೇಕ್ಷಕರ ಗಮನ ಸೆಳದಿತ್ತು. ಆದರೆ ಇದೀಗ ಶುರುವಾಗುತ್ತಲೇ ಮೈಕಲ್ ಹಾಗೂ ಈಶಾನಿ ಸಂಬಂಧ ಮುರಿದು ಬಿದ್ದಿದೆ.
ವಿನಯ್ ಅವರ ತಂಡದಲ್ಲಿ ಈಶಾನಿ ಇದ್ದರು. ಮೈಕಲ್ ಸಂಗೀತಾ ತಂಡದಲ್ಲಿದ್ದರು. ಟಾಸ್ಕ್‌ಗಳೆಲ್ಲ ಮುಗಿದ ಬಳಿಕ ವಿನಯ್ ತಂಡ ಗೆಲುವು ಸಾಧಿಸಿತು. ನಂತರ ನಡೆದ ಕ್ಯಾಪ್ಟನ್ಸಿ ಟಾಸ್ಕ್ ಗೆದ್ದು ವಿನಯ್ ಕ್ಯಾಪ್ಟನ್ ಆಗಿದ್ದಾರೆ. ಆ ಬಳಿಕ ಸಂಗೀತಾಗೆ ಕಳಪೆ ಪಟ್ಟ ಕೊಟ್ಟು ಜೈಲಿಗೆ ಕಳಿಸಿದ್ದಾರೆ.
ಇದೆಲ್ಲ ನಡೆದ ಬಳಿಕ ಕಾರ್ತಿಕ್ ಹಾಗೂ ತನಿಷಾ ಅಡುಗೆ ಮಾಡುತ್ತಿರುವಾಗ ಮೈಕಲ್ ಹಾಗೂ ಈಶಾನಿ ಅಲ್ಲಿಯೇ ಕುಳಿತಿರುತ್ತಾರೆ. ಆಗ ಈಶಾನಿ ಸಂಗೀತಾ ಬಗ್ಗೆ ನೆಗೆಟಿವ್ ಆಗಿ ಏನೋ ಹೇಳುತ್ತಾರೆ. ಇದಕ್ಕೆ ಸಂಗೀತಾ ನನ್ನ ಗೆಳತಿ ನಾನು ಅವರಿಗೆ ಬೆಂಬಲಿಸುತ್ತೇನೆ ಎಂದು ಕಾರ್ತಿಕ್ ಹೇಳುತ್ತಾರೆ. ಬಳಿಕ ಈಶಾನಿ, ನೀನು ಸಂಗೀತಾಳ ಕೈಗೊಂಬೆ ಎಂದು ಕಾರ್ತಿಕ್‌ಗೆ ಹೇಳುತ್ತಾರೆ. ಆ ಮಾತನ್ನು ಸ್ವೀಕರಿಸದ ಕಾರ್ತಿಕ್, ತಾಕತ್ತಿದ್ದರೆ ಒಬ್ಬಳೇ ನಿಂತು ಆಟ ಆಡು ನೋಡೋಣ. ಒಬ್ಬಳೇ ಆಡಿ ಗೆಲ್ಲೋಕೆ ನಿನಗೆ ಸಾಧ್ಯವಿಲ್ಲ ಅಂತ ಹೇಳ್ತಾರೆ. ಈಗಲೂ ಹೇಳ್ತೀನಿ ಒಬ್ಬಳೇ ನಿಂತು ಆಡಿ ಗೆಲ್ಲುವ ತಾಕತ್ತು ನಿನಗೆ ಇಲ್ಲ ಎಂದು ಕಾರ್ತಿ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಇದಕ್ಕೆ ಸಿಟ್ಟಾದ ಈಶಾನಿ ಮಹಿಳೆಯರಿಗೆ ಆಡಿ ಗೆಲ್ಲೋ ತಾಕತ್ತು ಇಲ್ಲ ಅಂತ ಹೇಳಿದೆ. ನಿನ್ನ ರಿಯಲ್ ಫೇಸ್ ಇದು ಎಂದು ಕಾರ್ತಿಕ್ ಮಾತನ್ನು ತಿರುಚಿ ಅರಚುತ್ತಾರೆ. ಆಗ ಕಾರ್ತಿಕ್ ಮಹಿಳೆಯರಿಗೆ ಗೆಲ್ಲುವ ತಾಕತ್ತು ಇಲ್ಲ ಎಂದು ಹೇಳಲಿಲ್ಲ, ಬದಲಿಗೆ ನಿನಗೆ ವೈಯಕ್ತಿಕವಾಗಿ ಗೆಲ್ಲುವ ತಾಕತ್ತು ಇಲ್ಲ ಎಂದು ಹೇಳಿದರು ಎಂದು ಇರುವ ಸತ್ಯವನ್ನ ಮೈಕೆಲ್ ಅಲ್ಲಿ ಹೇಳುತ್ತಾರೆ. ಮೈಕೆಲ್ ಕಾರ್ತಿಕ್ ಪರ ಮಾತನಾಡಿದ್ದು ಈಶಾನಿಗೆ ಇಷ್ಟವಾಗಲ್ಲ. ನೀನು ಒಬ್ಬ ಬಾಯ್ಫ್ರೆಂಡಾ ಥೂ ಎಂದು ಹೇಳುತ್ತಾರೆ. ಅಲ್ಲಿಂದ ಎದ್ದು ಹೋಗುತ್ತಾರೆ.
ಬಾತ್‌ರೂಮ್ ಏರಿಯಾದಲ್ಲಿ ಹೋಗಿ ಕುಳಿತ ಈಶಾನಿಗೆ ಸಮಾಧಾನ ಮಾಡಲು ಮೈಕಲ್ ಹೋಗುತ್ತಾರೆ. ಆಗಲೂ ಈಶಾನಿ, ಮೈಕೆಲ್ ನನ್ನ ಪರ ನಿಲ್ಲದೇ ಇದ್ದದ್ದು ನನಗೆ ಹೆಚ್ಚು ಬೇಸರವಾಯ್ತು ಎಂದು ಕೂಗಾಡುತ್ತಾರೆ. ಅದಕ್ಕೆ ಪ್ರತಿಕ್ರಿಯಿಸಿದ ಮೈಕೆಲ್, ಯಾರಾದರೂ ಆಗಲಿ, ಸುಳ್ಳು ಹೇಳಿದ್ದನ್ನು ಖಂಡಿಸಬೇಕು ಎಂಬುದು ನನ್ನ ಪಾಲಿಸಿ ಎನ್ನುತ್ತಾರೆ. ಇದಕ್ಕೆ ಈಶಾನಿ ನನ್ನನ್ನೇ ಸುಳ್ಳಿ ಎನ್ನುತ್ತೀಯ ಎಂದು ಕಿರುಚುತ್ತಾರೆ. ಜೋರಾಗಿ ಅಳಲು ಆರಂಭಿಸುತ್ತಾರೆ. ಮೈಕಲ್ ಅಲ್ಲಿಂದ ಸಿಟ್ಟಿನಿಂದ ಹೊರಟು ಹೋಗುವಾಗ ‘ಸೈಕೋ’ ಎಂದು ಹೇಳುತ್ತಾರೆ.
ಇದರಿಂದ ಈಶಾನಿ ಮತ್ತಷ್ಟು ಜೋರಾಗಿ ಅಳುತ್ತಾರೆ. ನನ್ನನ್ನು ಸೈಕೋ ಎಂದ.. ನಾನು ಇನ್ನು ಮುಂದೆ ಅವನೊಟ್ಟಿಗೆ ಇರುವುದಿಲ್ಲ.. ಹುಡುಗರೆಲ್ಲ ಹೀಗೇ ಎಂದೆಲ್ಲ ಹೇಳುತ್ತಾ ಜೋರು ಅಳಲು ಪ್ರಾರಂಭಿಸಿದರು. ವಿನಯ್, ನಮ್ರತಾ, ಸ್ನೇಹಿತ್ ಈಶಾನಿಯನ್ನು ಸಮಾಧಾನ ಪಡಿಸಲು ಪ್ರಯತ್ನಿಸುತ್ತಾರೆ.
ಬಿಗ್‌ಬಾಸ್ ಮನೆಯಲ್ಲಿ ಮೈಕಲ್ – ಈಶಾನಿಯ ಪ್ರೇಮಕತೆ ಶುರುವಾಗುತ್ತಲೇ ಮುಗಿದು ಹೋದಂತಿದೆ.