ಬೆಳ್ತಂಗಡಿ ಮಲೆಕುಡಿಯ ಸಮುದಾಯದ ಹಿರಿಯ ಹೋರಾಟಗಾರ ಎಲ್ಯಣ್ಣ ಮಲೆಕುಡಿಯ (60) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಕೋಲೋಡಿ ನಿವಾಸಿಯಾಗಿರುವ ಎಲ್ಯಣ್ಣ ಅವರು ಎರಡು ದಶಕದ ಹಿಂದ ಕೋಲೋಡಿಯ ಆದಿವಾಸಿಗಳ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟ ರಾಜ್ಯದ ಗಮನ ಸೆಳೆದಿತ್ತು. ಇವರ ಹೋರಾಟದ ಫಲವಾಗಿ ಕೋಲೋಡಿಯ ಆದಿವಾಸಿ ಕೋಲನಿಗೆ ಹೋಗುವ ರಸ್ತೆಗೆ ಅಡ್ಡಲಾಗಿ ಭೂಮಾಲಕರು ಹಾಕಿದ್ದ ಗೇಟ್ ಅನ್ನು ಸರಕಾರ ಕೊನೆಗೂ ತೆರವು ಗೊಳಿಸಿತ್ತು. ಕೋಲೋಡಿಯ ಆದಿವಾಸಿ ಕುಟುಂಬಗಳಿಗೂ ಸ್ವಾತಂತ್ರ್ಯ ಲಭಿಸಿತ್ತು. ತಮ್ಮ ಭೂಮಿಯ ರಸ್ತೆಯ ಹಕ್ಕಿಗಾಗಿ ಅವರು ನಿರಂತರ ಹೋರಾಟಗಳನ್ನೇ ನಡೆಸಿದ್ದರು. ನೆರಿಯದಲ್ಲಿ ಭೂಮಾಲಕ ಆದಿವಾಸಿ ವ್ಯಕ್ತಿಯ ಕೈ ಕಡಿದ ಪ್ರಕರಣದಲ್ಲಿಯೂ ಎಲ್ಯಣ್ಣ ಮಲೆಕುಡಿಯ ಅವರೇ ಆದಿವಾಸಿಗಳ ಪರ ಹೋರಾಟದ ನೇತೃತ್ವ ವಹಿಸಿದ್ದರು.
ಬೆಳ್ತಂಗಡಿ ತಾಲೂಕು ಮಲೆಕುಡಿಯರ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಎಲ್ಯಣ್ಣ ಮಲೆಕುಡಿಯ ಅವರು ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟಿನ ಸಲಹೆಗಾರರೂ ಆಗಿದ್ದರು.