ಪುತ್ತೂರು ನೆಹರು ನಗರದಲ್ಲಿ ನಡೆದ ಹುಲಿವೇಷ ತಂಡ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕೊಲೆ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇತ್ತ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ವೈದ್ಯರು, ಮೃತದೇಹದದಲ್ಲಿ 58 ಮಚ್ಚಿನ ಏಟುಗಳನ್ನು ನೋಡಿ ಶಾಕ್ ಆಗಿದ್ದಾರೆ.
ಗಾಂಜಾ ಮತ್ತಿನಲ್ಲಿ ಆರೋಪಿಗಳು ಅಕ್ಷಯ್ ಮೇಲೆ ಮಚ್ಚಿನಿಂದ ಕೊಚ್ಚಿರುವ ಅನುಮಾನ ವ್ಯಕ್ತವಾಗಿದೆ. ಸದ್ಯ ಚೇತನ್, ಮನೀಶ್, ಮಂಜ, ಕೇಶವ ಪಡೀಲು ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ಕೇಶವ ಪುತ್ತೂರು ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷನಾಗಿದ್ದಾನೆ.
ಏನಿದು ಪ್ರಕರಣ?
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆಹರು ನಗರ ಜಂಕ್ಷನ್ನಲ್ಲಿ ಪುತ್ತೂರಿನ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ (26) ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ದ್ವಿಚಕ್ರ ವಾಹನ ಮತ್ತು ಬಸ್ ನಡುವೆ ನಡೆದ ಅಪಘಾತ ವಿಚಾರದಲ್ಲಿ ಎರಡು ಸಾವಿರ ನೀಡುವ ಬಗ್ಗೆ ಮಾತುಕತೆ ನಡೆದಿತ್ತು.
ಈ ವೇಳೆ ಬಸ್ ಚಾಲಕ ಚೇತು ಎಂಬಾತನ ಬೆಂಬಲಿಗ ಹಾಗೂ ಅಕ್ಷಯ್ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಹೀಗೆ ಆರಂಭವಾದ ಗಲಾಟೆ ವಿಕೋಪಕ್ಕೆ ತಿರುಗಿತ್ತು. ಕೊನೆಗೆ ಮೂರಕ್ಕೂ ಅಧಿಕ ಮಂದಿಯ ತಂಡವು ಮಾಣಿ ಮೈಸೂರು ಹೆದ್ದಾರಿಯ ನೆಹರು ನಗರ ಜಂಕ್ಷನ್ನಲ್ಲಿ ಅಕ್ಷಯ್ನನ್ನ ಅಟ್ಟಾಡಿಸಿ ತಲವಾರಿನಿಂದ ಕೊಚ್ಚಿ ಕೊಲೆ ಮಾಡಿದ್ದರು.