ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರಿಗೆ ಕರ್ನಾಟಕ ಹೈಕೋರ್ಟ್ ಬುಧವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಶ್ರೀಗಳಿಗೆ ಏಳು ಷರತ್ತುಗಳನ್ನು ಹೈಕೋರ್ಟ್ ವಿಧಿಸಿದೆ. ಅದರಂತೆ, ಚಿತ್ರದುರ್ಗ ಮುರುಘಾ ಮಠಕ್ಕೆ ಶ್ರೀಗಳು ಪ್ರವೇಶಿಸುವಂತಿಲ್ಲ. ಪಾಸ್‌ಪೋರ್ಟ್ ಅನ್ನು ಕೋರ್ಟ್ ವಶಕ್ಕೆ ನೀಡಬೇಕು. ಇಬ್ಬರ ಶ್ಯೂರಿಟಿಗಳನ್ನು ಒದಗಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.
ಇಷ್ಟೇ ಅಲ್ಲದೆ, ಕೋರ್ಟ್ ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಬೇಕು. ಇಂತಹ ಕೃತ್ಯಗಳನ್ನು ಪುನರಾವರ್ತನೆ ಮಾಡುವಂತಿಲ್ಲ ಎಂದು ಕೋರ್ಟ್ ಸೂಚನೆ ನೀಡಿದೆ. ಆದಾಗ್ಯೂ, ಮುರುಘಾಶ್ರೀ ಬಿಡುಗಡೆ ಸದ್ಯಕ್ಕೆ ಅನುಮಾನವಾಗಿದೆ.
ಜಾಮೀನು ಸಿಕ್ಕಿದರೂ ಜೈಲು ವಾಸದಿಂದ ಮುಕ್ತಿ ಇಲ್ಲ
ಜಾಮೀನು ಸಿಕ್ಕಿದರೂ ಸದ್ಯಕ್ಕೆ ಮುರುಘಾ ಶ್ರೀ ಜೈಲಿನಿಂದ ಬಿಡುಗಡೆ ಸಾಧ್ಯವಿಲ್ಲ. ಯಾಕೆಂದರೆ ಅವರ ವಿರುದ್ಧ ಎರಡು ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಅವುಗಳ ವಿಚಾರಣೆ ನಡೆಯುತ್ತಿದೆ. ಮತ್ತೊಂದು ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ಬಾಕಿ ಇದ್ದು, ಅದರಲ್ಲಿ ಜಾಮೀನು ದೊರೆಯದೆ ಅವರು ಜೈಲಿನಿಂದ ಬಿಡುಗಡೆಯಾಗಲಾರರು.
ಮುರುಘಾ ಶ್ರೀ ವಿರುದ್ಧ ಷಡ್ಯಂತ್ರ ನಡೆಸಿದ ಆರೋಪದ ಮೇಲೆ ಮಾಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ ಬಸವರಾಜನ್ ದಂಪತಿ ಮೇಲೆ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ಕೆಲವು ದಿನಗಳ ಹಿಂದಷ್ಟೇ ರದ್ದುಪಡಿಸಿತ್ತು.
ಏನಿದು ಪ್ರಕರಣ?
ಚಿತ್ರದುರ್ಗದ ಬೃಹನ್ಮಠದ ಆಡಳಿತದಲ್ಲಿರುವ ವಿದ್ಯಾರ್ಥಿ ನಿಲಯದ ಹಲವು ವಿದ್ಯಾರ್ಥಿನಿಯರ ಮೇಲೆ ಶ್ರೀಗಳು ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ವಿದ್ಯಾರ್ಥಿನಿಯರು ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯ ಕದ ತಟ್ಟಿದ್ದರು. ಚಿತ್ರದುರ್ಗದ ಮುರುಘಾ ಮಠದ ವಿದ್ಯಾರ್ಥಿ ನಿಲಯದಲ್ಲಿರುವ ನಮ್ಮನ್ನು ಸ್ವಾಮೀಜಿಗಳು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸ್ವಾಮೀಜಿಯವರಿಗೆ ಹಣ್ಣು ತೆಗೆದುಕೊಂಡು ಹೋಗಿ ಎಂದು ಮಹಿಳಾ ವಾರ್ಡನ್ ಅವರೇ ನಮ್ಮನ್ನು ಕಳುಹಿಸುತ್ತಿದ್ದರು. ಸ್ವಾಮೀಜಿ ಇದ್ದ ಸ್ಥಳಕ್ಕೆ ತೆರಳಿದರೆ ಅಲ್ಲಿ ನಮಗೆ ಮತ್ತು ಬರುವಂತೆ ಮಾಡಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದರು ಎಂದು ಆರೋಪಿಸಿ ಮುರುಘಾ ಶರಣರ ವಿರುದ್ಧ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಇಬ್ಬರು ವಿದ್ಯಾರ್ಥಿನಿಯಿರಿಂದ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಅದಾದ ನಂತರ ಪ್ರಕರಣ ಚಿತ್ರದುರ್ಗಕ್ಕೆ ವರ್ಗಾವಣೆಯಾಗಿದ್ದು, ಬಳಿಕ ಫೋಕ್ಸೋ ಪ್ರಕರಣದಡಿಯಲ್ಲಿ ಮುರುಘಾ ಶರಣರನ್ನು 2022ರ ಸೆಪ್ಟೆಂಬರ್ 1ರಂದು ಪೊಲೀಸರು ಬಂಧಿಸಿದ್ದರು.