ಬೈಕ್‌ಗೆ ಖಾಸಗಿ ಬಸ್ ಡಿಕ್ಕಿ – ಮಗಳ ಮನೆಗೆ ತೆರಳುತ್ತಿದ್ದ ಮಹಿಳೆ ದಾರುಣ ಸಾವು

ಶೇರ್ ಮಾಡಿ

ಟಿವಿಎಸ್ ಎಕ್ಸೆಲ್ ಬೈಕ್‌ಗೆ ಖಾಸಗಿ ಬಸ್ ಡಿಕ್ಕಿಯಾದ ಪರಿಣಾಮ ಮಹಿಳೆ ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಂಗಳೂರು-ಬನ್ನೇರುಘಟ್ಟ ಮುಖ್ಯರಸ್ತೆಯ ಮೀನಾಕ್ಷಿ ದೇವಾಲಯದ ಬಳಿ ನಡೆದಿದೆ.

ಹುಳಿಮಾವು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಶ್ಯಾನಭೋಗನಹಳ್ಳಿ ನಿವಾಸಿ ಸೆಲ್ವಿ (48) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪತಿ ಜೊತೆ ಬೈಕ್‌ನಲ್ಲಿ ಹೋಗುತ್ತಿದ್ದ ಸಂದರ್ಭ ಅವಘಡ ಸಂಭವಿಸಿದೆ. ಸೆಲ್ವಿ ಪತಿ ಮಾರತಹಳ್ಳಿಯಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದರು. ಮಗಳನ್ನು ಸಹಾ ಮಾರತಹಳ್ಳಿಗೆ ಮದುವೆ ಮಾಡಿಕೊಡಲಾಗಿತ್ತು.

ಮಾರತಹಳ್ಳಿಯ ಮಗಳ ಮನೆಗೆಂದು ಪತಿ ಜೊತೆ ಹೊರಟಿದ್ದ ಸಂದರ್ಭ ಅತಿವೇಗವಾಗಿ ಬಂದ ಖಾಸಗಿ ಬಸ್ ಟಿವಿಎಸ್ ಎಕ್ಸೆಲ್ ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಯಲ್ಲಿ ಬಿದ್ದ ಮಹಿಳೆ ಮೇಲೆ ಬಸ್ ಹರಿದಿದ್ದು, ಸ್ಥಳದಲ್ಲೇ ಮಹಿಳೆ ದಾರುಣವಾಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಹುಳಿಮಾವು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ರವಾನೆ ಮಾಡಿ ಘಟನೆ ಸಂಬಂಧ ಪ್ರಕರಣ ದಾಖಲಿಸಲಾಗಿದೆ.

Leave a Reply

error: Content is protected !!